ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು, ಶಬರಿಮಲೆಗೆ ಭೇಟಿ ನೀಡಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ದೌಪದಿ ಮುರ್ಮು ಅವರ ಪವಿತ್ರ ಯಾತ್ರೆ ಪಂಬಾ ನದಿತೀರದಿಂದ ಪ್ರಾರಂಭವಾಯಿತು. ಸಾಂಪ್ರದಾಯಿಕ ಚಾರಣ ಮಾರ್ಗದಲ್ಲಿ ಅವರಿಗೆ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಪತಿಯ ಭೇಟಿಯನ್ನು ಮುನ್ನೆಚ್ಚರಿಕೆಯಿಂದ ನಿರ್ವಹಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಸನ್ನಾಹಗಳನ್ನು ಕೈಗೊಂಡಿತ್ತು. ಸನ್ನಿಧಾನಕ್ಕೆ ಮುನ್ನ ಇರುವ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ರಾಷ್ಟ್ರಪತಿಯವರು ಮುಖ್ಯ ದೇವಾಲಯವನ್ನು ತಲುಪಿದರು.
ದೇವಾಲಯದ ಪ್ರವೇಶದ್ವಾರದಲ್ಲಿ ರಾಷ್ಟ್ರಪತಿ ಮುರ್ಮು ಅವರನ್ನು ರಾಜ್ಯ ದೇವಸ್ವಂ ಸಚಿವ ವಿ.ಎನ್. ವಾಸವನ್ ಮತ್ತು ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರು ಬರಮಾಡಿಕೊಂಡರು. ದೇವಾಲಯದ ತಂತ್ರಿ ಮತ್ತು ಕಂದರಾರ್ (ಮುಖ್ಯ ಪುರೋಹಿತ) ಮಹೇಶ್ ಮೋಹನರಾರು ಅವರು ಪವಿತ್ರ ‘ಪೂರ್ಣಕುಂಭ’ದೊಂದಿಗೆ ರಾಷ್ಟ್ರಪತಿಯವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.
ರಾಷ್ಟ್ರಪತಿ ಮುರ್ಮು ಅವರು ಸಂಪೂರ್ಣ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಪಾಲಿಸಿದರು. ಅವರು ಪವಿತ್ರವಾದ ‘ಇರುಮುಡಿ’ ತಲೆಯ ಮೇಲೆ ಹೊತ್ತುಕೊಂಡೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ದರ್ಶನದ ನಂತರ, ಅವರು ತಮ್ಮ ಇರುಮುಡಿಗಳನ್ನ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇರಿಸಿದರು. ನಂತರ ಮುಖ್ಯ ಅರ್ಚಕರು ಪೂಜೆಗಾಗಿ ಈ ಇರುಮುಡಿ ಪೊಟ್ಟಣಿಗಳನ್ನು ಸ್ವೀಕರಿಸಿದರು.
ರಾಷ್ಟ್ರಪತಿಯವರ ಭೇಟಿಯ ಸಮಯದಲ್ಲಿ ಸಾಮಾನ್ಯ ಭಕ್ತರ ದರ್ಶನದ ಮೇಲೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಲಾಗಿತ್ತು. ಇದು ಭದ್ರತಾ ಕಾರಣಗಳಿಗಾಗಿ ಮಾತ್ರವಾಗಿತ್ತು. ರಾಷ್ಟ್ರಪತಿ ಮುರ್ಮು ಅವರು ಮಲಿಕಾಪುರಂ ಸೇರಿದಂತೆ ಹತ್ತಿರದ ಇತರ ದೇವಾಲಯಗಳ ದರ್ಶನವನ್ನು ಪೂರ್ಣಗೊಳಿಸಿದ ನಂತರ, ಟಿಡಿಬಿ ಅತಿಥಿ ಗೃಹಕ್ಕೆ ಮರಳಿ ಅಲ್ಲಿ ಊಟ ಮಾಡಿ ಮತ್ತು ವಿಶ್ರಾಂತಿ ತೆಗೆದುಕೊಂಡರು.