ಪ್ರಯಾಗ್‌ರಾಜ್ ಪಟಾಕಿ ಕಾರ್ಖಾನೆ ಸ್ಫೋಟ: 8 ಮಕ್ಕಳು ಸೇರಿ 11 ಮಂದಿ ಸಾವು

Untitled design (21)

ಪ್ರಯಾಗ್‌ರಾಜ್, ಸೆಪ್ಟೆಂಬರ್ 1: ಉತ್ತರ ಪ್ರದೇಶದ ಪ್ರಯಾಗ್‌ರಾಜ್-ಕೌಶಂಬಿ ಗಡಿಯಲ್ಲಿರುವ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ 11 ಮಂದಿ ಬಲಿಯಾಗಿದ್ದಾರೆ. ಮೃತರಲ್ಲಿ ಎಂಟು ಮಕ್ಕಳು ಸೇರಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆ ಸಂಪೂರ್ಣವಾಗಿ ನೆಲಸಮವಾಗಿದ್ದು, ಸುತ್ತಮುತ್ತಲಿನ ಹಲವು ಮನೆಗಳಿಗೂ ಹಾನಿಯಾಗಿದೆ.

ಕೌಶಂಬಿ ಜಿಲ್ಲೆಯ ಮೊಹಮ್ಮದ್‌ಪುರ ಗ್ರಾಮದಲ್ಲಿ ನಿನ್ನೆ ಆಗಸ್ಟ್ 31ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಈ ದುರಂತ ಸಂಭವಿಸಿದೆ. ಸ್ಫೋಟದ ಶಬ್ದ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಕೇಳಿಬಂದಿದೆ. ಘಟನೆಯ ಬಳಿಕ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರು ಗಾಯಾಳುಗಳನ್ನು ಹಾಸಿಗೆಗಳ ಮೇಲೆ ಹೊತ್ತು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಸ್ಫೋಟದ ಪರಿಣಾಮ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿದ್ದ ಎಂಟು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ, ಸುಮಾರು 500 ಮೀಟರ್ ದೂರದಲ್ಲಿದ್ದ ಪ್ರಯಾಗ್‌ರಾಜ್-ಕಾನ್ಪುರ ರೈಲು ಮಾರ್ಗದ ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್‌ಗೂ ಹಾನಿಯಾಗಿದ್ದು, ರೈಲು ಸಂಚಾರ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಬಳಿಕ ರೈಲ್ವೆ ಎಂಜಿನಿಯರ್‌ಗಳು ದುರಸ್ತಿ ಕಾರ್ಯ ಪೂರ್ಣಗೊಳಿಸಿ ಸಂಚಾರ ಪುನಾರಂಭಿಸಿದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸರು, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ ಸುಮಾರು 200 ಮಂದಿ ಭಾಗವಹಿಸಿದ್ದರು. ಅವಶೇಷಗಳನ್ನು ತೆರವುಗೊಳಿಸಲು 10 ಬುಲ್ಡೋಜರ್‌ಗಳನ್ನು ಬಳಸಲಾಯಿತು.

ಪ್ರಮುಖ ಆರೋಪಿ ನೌಶಾದ್ ಬಂಧನ

ಘಟನೆಗೆ ಸಂಬಂಧಿಸಿದಂತೆ ಅಕ್ರಮ ಪಟಾಕಿ ಕಾರ್ಖಾನೆಯ ಮಾಲೀಕ ನೌಶಾದ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸ್ಫೋಟದ ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಸೆಪ್ಟೆಂಬರ್ 1ರ ಮುಂಜಾನೆ ಚರ್ವಾ ಪ್ರದೇಶದ ಸೈಯದ್ ಸರಾವನ್ ಬಳಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ಬಂಧನದಿಂದ ತಪ್ಪಿಸಿಕೊಳ್ಳಲು ನೌಶಾದ್ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ನೌಶಾದ್ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ವಶಕ್ಕೆ ಪಡೆದು ಮಂಝನ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಆತನ ಸ್ಥಿತಿ ಸ್ಥಿರವಾಗಿದೆ.

ಪರವಾನಗಿ ರದ್ದಾದರೂ ಅಕ್ರಮವಾಗಿ ಕಾರ್ಖಾನೆ

ನೌಶಾದ್ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯ ಪರವಾನಗಿಯನ್ನು 2024ರಲ್ಲೇ ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ವಸತಿ ಪ್ರದೇಶದಲ್ಲೇ ಅಕ್ರಮವಾಗಿ ಕಾರ್ಖಾನೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪಿಪ್ರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಮೃತರನ್ನು ಪ್ರಿಯಾಂಜಲಿ (5), ಪ್ರವೀಣ್ ಸಿಂಗ್ (13), ಜಾನ್ವಿ (12), ಆದಿತ್ಯ (12), ರವಿ (8), ಜ್ಞಾನ್ ಸಿಂಗ್ (40), ಆದಿತ್ಯ (8), ಅಂಜು (32), ವಿಕ್ರಮ್ ಸರೋಜ್ (35), ಅಂಶ್ (6) ಮತ್ತು ನನ್ಹಾ (4) ಎಂದು ಗುರುತಿಸಲಾಗಿದೆ. 

Exit mobile version