ಜಕಾರ್ತ್‌ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ: ಫೈಟರ್ ಜೆಟ್‌ಗಳಿಂದ ವಿಶೇಷ ಬೆಂಗಾವಲು

Web Photo Editor 2026 07 07T103953.060

ಇಂಡೋನೇಷ್ಯಾ ರಾಜಧಾನಿ ಜಕಾರ್ತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಲಭಿಸಿದೆ. ಮೂರು ರಾಷ್ಟ್ರಗಳ ರಾಜತಾಂತ್ರಿಕ ಪ್ರವಾಸದ ಅಂಗವಾಗಿ ಮೋದಿ ಅವರು ಮೊದಲು ಇಂಡೋನೇಷ್ಯಾಗೆ ಭೇಟಿ ನೀಡಿದ್ದು, ಈ ಭೇಟಿಯು ಭಾರತ–ಇಂಡೋನೇಷ್ಯಾ ಸಂಬಂಧಗಳಿಗೆ ಹೊಸ ಉತ್ತೇಜನ ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಎರಡು ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವುದು ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಮನ್ವಯವನ್ನು ಬಲಪಡಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಪ್ರಧಾನಿ ಮೋದಿ ಅವರ ವಿಮಾನ ಇಂಡೋನೇಷ್ಯಾ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಇಂಡೋನೇಷ್ಯಾ ವಾಯುಪಡೆಯ ಫೈಟರ್ ಜೆಟ್‌ಗಳು ಬೆಂಗಾವಲು ನೀಡಿದ್ದು, ವಿಶೇಷ ಗೌರವ ಸಲ್ಲಿಸಿತು. ಬಳಿಕ ಜಕಾರ್ತ್‌ನಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಔಪಚಾರಿಕವಾಗಿ ಮೋದಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಭಾರತೀಯ ಪ್ರಧಾನಿಗೆ ನೀಡಲಾದ ಈ ಸ್ವಾಗತವು ಉಭಯ ರಾಷ್ಟ್ರಗಳ ಸ್ನೇಹಪೂರ್ವಕ ಬಾಂಧವ್ಯಕ್ಕೆ ಸಂಕೇತವಾಗಿ ಪರಿಣಮಿಸಿತು.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಅವರ ವೈಯಕ್ತಿಕ ಆಹ್ವಾನದ ಮೇರೆಗೆ ಮೋದಿ ಈ ಭೇಟಿ ಕೈಗೊಂಡಿದ್ದಾರೆ. 2018ರಲ್ಲಿ ಭಾರತ ಮತ್ತು ಇಂಡೋನೇಷ್ಯಾ ತಮ್ಮ ರಾಜತಾಂತ್ರಿಕ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಏರಿಸಿದ ಬಳಿಕ ನಡೆಯುತ್ತಿರುವ ಈ ಮಹತ್ವದ ಉನ್ನತ ಮಟ್ಟದ ಭೇಟಿ ಹಲವು ಅಂಶಗಳಲ್ಲಿ ವಿಶೇಷವಾಗಿಸಿದೆ. ಉಭಯ ರಾಷ್ಟ್ರಗಳು ರಕ್ಷಣಾ ಸಹಕಾರ, ಸಮುದ್ರ ಭದ್ರತೆ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಿವೆ.

ಈ ಭೇಟಿಯಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಕಡಲ ಸಮನ್ವಯಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಉನ್ನತ ಮಟ್ಟದ ಅಧಿಕೃತ ವಿನಿಮಯಗಳು, ನಿಯಮಿತ ಜಂಟಿ ಮಿಲಿಟರಿ ಅಭ್ಯಾಸಗಳು, ರಕ್ಷಣಾ ಉದ್ಯಮ ಸಹಭಾಗಿತ್ವ ಹಾಗೂ ಇಂಡೋನೇಷ್ಯಾದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ ಖರೀದಿ ಕುರಿತ ಚರ್ಚೆಗಳು ಗಮನಾರ್ಹವಾಗಿವೆ. ಇದರ ಜೊತೆಗೆ ಸಮುದ್ರ ಮಾರ್ಗಗಳ ಭದ್ರತೆ, ಪ್ರಾದೇಶಿಕ ಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಸಹಕಾರಕ್ಕೂ ಒತ್ತು ನೀಡಲಾಗಿದೆ.

‘ಮಹಾಸಾಗರ್’ ದೃಷ್ಟಿಕೋನದಡಿ ಸಮುದ್ರ ಕ್ಷೇತ್ರದಲ್ಲಿ ಭದ್ರತೆ, ಸ್ಥಿರತೆ ಮತ್ತು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಜೊತೆಗೆ ಆರ್ಥಿಕತೆ, ಇಂಧನ, ಮೂಲಸೌಕರ್ಯ, ಡಿಜಿಟಲ್ ತಂತ್ರಜ್ಞಾನ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಿಸ್ತರಿಸುವ ಸಾಧ್ಯತೆಗಳನ್ನೂ ಅವರು ಉಲ್ಲೇಖಿಸಿದ್ದಾರೆ. ಇಂಡೋನೇಷ್ಯಾದಲ್ಲಿ ವಾಸಿಸುವ ಭಾರತೀಯ ವಲಸಿಗ ಸಮುದಾಯದ ಸದಸ್ಯರನ್ನೂ ಮೋದಿ ಭೇಟಿಯಾಗಲಿದ್ದು, ಈ ಭೇಟಿ ಜನ-ಜನರ ನಡುವಿನ ಬಾಂಧವ್ಯವನ್ನೂ ಮತ್ತಷ್ಟು ಗಟ್ಟಿಗೊಳಿಸಲಿದೆ.

ಇಂಡೋನೇಷ್ಯಾ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಬಹು ದೇಶೀಯ ಪ್ರವಾಸದ ಮುಂದಿನ ಹಂತವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಜಕಾರ್ತ್ ಭೇಟಿ ಭಾರತ–ಇಂಡೋನೇಷ್ಯಾ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Exit mobile version