ಅಮರನಾಥ ಯಾತ್ರೆಗೂ ಮುನ್ನ ಭಕ್ತರಿಗೆ ಮೋದಿ ಪತ್ರ: ಐದು ಪ್ರತಿಜ್ಞೆ

Untitled design (62)

ಈ ವರ್ಷದ ಪವಿತ್ರ ಅಮರನಾಥ ಯಾತ್ರೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಯಾತ್ರಿಕರಿಗೆ ವಿಶೇಷವಾದ ಪತ್ರ ಬರೆದು ಶುಭಾಶಯ ಕೋರಿದ್ದಾರೆ. “ಹರ ಹರ ಮಹಾದೇವ್” ಮತ್ತು “ಜೈ ಬಾಬಾ ಬರ್ಫಾನಿ” ಎಂಬ ಘೋಷಣೆಗಳೊಂದಿಗೆ ಆರಂಭವಾಗುವ ಈ ಪತ್ರದಲ್ಲಿ, ಯಾತ್ರೆ ಕೇವಲ ಧಾರ್ಮಿಕ ಪ್ರವಾಸವಲ್ಲ; ಅದು ಶಿಸ್ತು, ಸೇವಾ ಮನೋಭಾವ, ಸ್ವಚ್ಛತೆ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ನೆನಪಿಸುವ ಆತ್ಮೀಯ ಅನುಭವವೂ ಆಗಬೇಕು ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.

ಭಕ್ತರ ಮುಂದೆ ಪ್ರಧಾನಿ ಮೋದಿ ಐದು ಪ್ರಮುಖ ಪ್ರತಿಜ್ಞೆ

ಈ ಪತ್ರದಲ್ಲಿ ಪ್ರಧಾನಿ ಮೋದಿ ಭಕ್ತರ ಮುಂದೆ ಐದು ಪ್ರಮುಖ ಪ್ರತಿಜ್ಞೆಗಳನ್ನು ಇಟ್ಟಿದ್ದಾರೆ. ಮೊದಲನೆಯದಾಗಿ, ಯಾತ್ರಾ ಮಾರ್ಗದ ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಎಲ್ಲಿಯೂ ಕಸ ಹಾಕದೇ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎರಡನೆಯದಾಗಿ, ಮಳೆ, ಶೀತ ಮತ್ತು ಜಾರುವ ಪರ್ವತ ಹಾದಿಗಳನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ನೀಡುವ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.

ಮೂರನೆಯ ಪ್ರತಿಜ್ಞೆಯಾಗಿ “ವೋಕಲ್ ಫಾರ್ ಲೋಕಲ್”ಗೆ ಪ್ರಧಾನಿ ಒತ್ತು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಡ ಕುಟುಂಬಗಳು ಹಾಗೂ ಯುವಕರ ಜೀವನೋಪಾಯಕ್ಕೆ ನೆರವಾಗಲು, ಯಾತ್ರೆಯ ಒಟ್ಟು ವೆಚ್ಚದ ಕನಿಷ್ಠ ಶೇಕಡಾ 10ರಷ್ಟನ್ನು ಅಲ್ಲಿನ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಬಳಸಬೇಕು ಎಂದು ಕರೆ ನೀಡಿದ್ದಾರೆ. ನಾಲ್ಕನೇ ಸಂಕಲ್ಪವಾಗಿ ಪರಿಸರ ಸಂರಕ್ಷಣೆಯನ್ನು ಪ್ರಸ್ತಾಪಿಸಿ, ಯಾತ್ರೆ ಮುಗಿಯುವ ರಕ್ಷಾ ಬಂಧನದಂದು ಸಹೋದರ ಅಥವಾ ಸಹೋದರಿಗೆ ಒಂದು ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ “ಏಕ್ ಪೆಡ್ ಮಾ ಕೆ ನಾಮ್” ಅಭಿಯಾನಕ್ಕೆ ಕೈಜೋಡಿಸಬೇಕು ಎಂದಿದ್ದಾರೆ.

ಐದನೇ ಮತ್ತು ಅಂತಿಮ ಪ್ರತಿಜ್ಞೆಯಾಗಿ “ರಾಷ್ಟ್ರ ಪ್ರಥಮ”ದ ಸಂದೇಶ ನೀಡಿರುವ ಪ್ರಧಾನಿ, ಯಾತ್ರೆ ಮುಗಿದ ನಂತರವೂ ವರ್ಷವಿಡೀ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಭಕ್ತರನ್ನು ಪ್ರೇರೇಪಿಸಿದ್ದಾರೆ.

ಅಮರನಾಥ ದೇವಾಲಯ ಮಂಡಳಿ, ಜಮ್ಮು-ಕಾಶ್ಮೀರ ಆಡಳಿತ, ಭಾರತೀಯ ಸೇನೆ, ಸಿಆರ್‌ಪಿಎಫ್, ಪೊಲೀಸ್, ಐಟಿಬಿಪಿ, ಬಿಎಸ್‌ಎಫ್, ಎನ್‌ಡಿಆರ್‌ಎಫ್, ವೈದ್ಯರು, ಸ್ವಯಂಸೇವಕರು, ಕುದುರೆ ಮಾಲೀಕರು ಮತ್ತು ಪಲ್ಲಕ್ಕಿ ಹೊರುವವರ ಸೇವೆಯನ್ನು ಮೋದಿ ಅವರು ಮನಪೂರ್ವಕವಾಗಿ ಶ್ಲಾಘಿಸಿದ್ದಾರೆ.

ಮೋದಿ ಪ್ರತಿಜ್ಞೆಗೆ ಯಾತ್ರಿಕರ ಪ್ರತಿಕ್ರಿಯೆ

ಯಾತ್ರೆಯ ಮಾರ್ಗದಲ್ಲಿ ಅನೇಕ ಭಕ್ತರು ಪ್ರಧಾನಿ ಬರೆದ ಪತ್ರವನ್ನು ಕೈಯಲ್ಲಿ ಹಿಡಿದು ಕೃತಜ್ಞತೆ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಜಾಲಾತಾಣದಲ್ಲಿ ಕಂಡುಬಂದಿವೆ. ಯಾತ್ರೆಯ ಸೌಲಭ್ಯಗಳನ್ನು ಸರ್ಕಾರದ ವ್ಯವಸ್ಥೆ ಎಂದು ಮಾತ್ರವಲ್ಲ, ತಮ್ಮದೇ ಹೊಣೆಗಾರಿಕೆಯ ಭಾಗವೆಂದು ನೋಡಬೇಕು ಎಂಬ ಸಂದೇಶವೂ ಭಕ್ತರ ನಡುವೆ ಪ್ರತಿಧ್ವನಿಸುತ್ತಿದೆ. ಒಟ್ಟಾರೆ, ಪ್ರಧಾನಿ ಮೋದಿ ಅವರ ಈ ಪತ್ರ ಅಮರನಾಥ ಯಾತ್ರೆಯನ್ನು ಭಕ್ತಿ, ಶಿಸ್ತು, ಪರಿಸರ ಕಾಳಜಿ ಮತ್ತು ರಾಷ್ಟ್ರಸೇವೆಯ ಸಂಕಲ್ಪದೊಂದಿಗೆ ಜೋಡಿಸುವ ಪ್ರಯತ್ನವಾಗಿ ಗಮನ ಸೆಳೆದಿದೆ.

Exit mobile version