ದೇಶದ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸೆಮಿಕಂಡಕ್ಟರ್ ಉದ್ಯಮದ ಪ್ರಮುಖರು, ಪ್ರದರ್ಶಕರು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಸೆಮಿಕಂಡಕ್ಟರ್ ಉದ್ಯಮಕ್ಕೆ ಸಂಬಂಧಿಸಿದ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 17ರಿಂದ 19ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಸೆಮಿಕಾನ್ ಇಂಡಿಯಾ 2026, ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಒತ್ತು ನೀಡಲಿದೆ.
‘ಸಿಲಿಕಾನ್ ಟು ಸಿಸ್ಟಮ್ಸ್: ಬಿಲ್ಡಿಂಗ್ ದಿ ಇಕೋಸಿಸ್ಟಂ’ ಎಂಬ ಪರಿಕಲ್ಪನೆಯಡಿ ನಡೆಯುತ್ತಿರುವ ಈ ಬಾರಿಯ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳು, ತಂತ್ರಜ್ಞಾನ ತಜ್ಞರು, ಹೂಡಿಕೆದಾರರು ಹಾಗೂ ನೀತಿ ನಿರೂಪಕರು ಭಾಗವಹಿಸಿದ್ದಾರೆ. ಸೆಮಿಕಂಡಕ್ಟರ್ ತಂತ್ರಜ್ಞಾನದಿಂದ ಹಿಡಿದು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅಭಿವೃದ್ಧಿವರೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ಇಲ್ಲಿ ಚರ್ಚೆಗಳು ನಡೆಯಲಿವೆ.
52 ದೇಶಗಳ ಪ್ರತಿನಿಧಿಗಳ ಭಾಗಿ
ಸೆಮಿಕಾನ್ ಇಂಡಿಯಾ 2026ರಲ್ಲಿ 52 ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದಾರೆ. 600ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಭವಿಷ್ಯದ ಯೋಜನೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಲ್ಲದೆ, 400ಕ್ಕೂ ಹೆಚ್ಚು ಉದ್ಯಮ ಕ್ಷೇತ್ರದ ಹಿರಿಯ ಅಧಿಕಾರಿಗಳು ಹಾಗೂ 150ಕ್ಕೂ ಹೆಚ್ಚು ಭಾಷಣಕಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನೆದರ್‌ಲ್ಯಾಂಡ್ಸ್, ಸಿಂಗಾಪುರ ಮತ್ತು ಸ್ವೀಡನ್ ದೇಶಗಳಿಗಾಗಿ ವಿಶೇಷ ಪೆವಿಲಿಯನ್‌ಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ 12 ರಾಜ್ಯಗಳ ಬೂತ್‌ಗಳು, ಸ್ಟಾರ್ಟಪ್ ಪೆವಿಲಿಯನ್ ಹಾಗೂ ವರ್ಕ್‌ಫೋರ್ಸ್ ಡೆವಲಪ್‌ಮೆಂಟ್ ಪೆವಿಲಿಯನ್‌ಗಳು ಪ್ರಮುಖ ಆಕರ್ಷಣೆಯಾಗಿವೆ.
ಮೂರು ದಿನಗಳ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಕೌಶಲ್ಯಾಭಿವೃದ್ಧಿ, ಸಂಶೋಧನೆ ಹಾಗೂ ಹೂಡಿಕೆಗಳ ಕುರಿತು ವಿವಿಧ ಅಧಿವೇಶನಗಳು ನಡೆಯಲಿವೆ.
ಉದ್ಘಾಟನಾ ದಿನದಂದು ಸೆಮಿಕಂಡಕ್ಟರ್ ಉದ್ಯಮದ ಹಲವು ಪ್ರಮುಖರು ಭಾಷಣ ಮಾಡಿದರು. ಮೈಕ್ರಾನ್ ಎಲೆಕ್ಟ್ರಾನಿಕ್ಸ್, ಟಾಟಾ ಟೆಕ್ನಾಲಜೀಸ್, ಅಪ್ಲೈಡ್ ಮೆಟೀರಿಯಲ್ಸ್, ಎಎಸ್‌ಎಂಎಲ್, ಟೋಕಿಯೋ ಎಲೆಕ್ಟ್ರಾನ್, ಜಬಿಲ್, ರಾಬಿಡಸ್, ಲಾಮ್ ರಿಸರ್ಚ್ ಹಾಗೂ ಅಡ್ವಾಂಟೆಸ್ಟ್ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳ ಸಿಇಒಗಳು ಮತ್ತು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ, ತಾಂತ್ರಿಕ ಸಾಮರ್ಥ್ಯ, ಪ್ರತಿಭಾವಂತ ಮಾನವ ಸಂಪನ್ಮೂಲ ಹಾಗೂ ಹೂಡಿಕೆ ಅವಕಾಶಗಳ ಕುರಿತು ಉದ್ಯಮದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳ ಬಗ್ಗೆಯೂ ಕಾರ್ಯಕ್ರಮದಲ್ಲಿ ಚರ್ಚೆಗಳು ನಡೆಯುತ್ತಿವೆ.
ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸೆಮಿಕಾನ್ ಇಂಡಿಯಾ 2026 ಮಹತ್ವದ ವೇದಿಕೆಯಾಗಿ ರೂಪುಗೊಂಡಿದೆ. ಸೆಪ್ಟೆಂಬರ್ 19ರಂದು ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.
