ಅಮರಾವತಿ (ಆಗಸ್ಷ್ 01): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಆಂಧ್ರ ಪ್ರದೇಶದಲ್ಲಿ 17,900 ಕೋಟಿ ರೂ. ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಭೋಗಾಪುರಂನಲ್ಲಿ ನಿರ್ಮಾಣಗೊಂಡಿರುವ ಅಳ್ಳೂರಿ ಸೀತಾರಾಮ ರಾಜು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಈ ಯೋಜನೆಗಳು ‘ಸ್ವರ್ಣ ಆಂಧ್ರ’ ನಿರ್ಮಾಣದ ಕನಸಿಗೆ ಹೊಸ ವೇಗ ನೀಡಲಿದ್ದು, ಉತ್ತರ ಆಂಧ್ರದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಿವೆ ಎಂದು ಹೇಳಿದರು.
ಆಂಧ್ರದ ಮೂರನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಸುಮಾರು 5,640 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವು ಆಂಧ್ರ ಪ್ರದೇಶದ ಮೂರನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಮೊದಲ ಹಂತದಲ್ಲೇ ವರ್ಷಕ್ಕೆ 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ವಿಮಾನ ನಿಲ್ದಾಣವನ್ನು ಮುಂದಿನ ಹಂತಗಳಲ್ಲಿ 4 ಕೋಟಿ ಪ್ರಯಾಣಿಕರ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆದಿವಾಸಿ ನಾಯಕ ಅಳ್ಳೂರಿ ಸೀತಾರಾಮ ರಾಜು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕನ ಹೆಸರಿನಲ್ಲಿ ನಿರ್ಮಾಣವಾಗಿರುವ ಈ ವಿಮಾನ ನಿಲ್ದಾಣ ಉತ್ತರ ಆಂಧ್ರದ ಅಭಿವೃದ್ಧಿಗೆ ಹೊಸ ರನ್‌ವೇ ಹಾಗೂ ಯುವಜನತೆಗೆ ಹೊಸ ಅವಕಾಶಗಳ ಲಾಂಚ್‌ಪ್ಯಾಡ್ ಆಗಲಿದೆ” ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ಹಿಂದೆ ವಿಮಾನ ನಿಲ್ದಾಣಗಳಿಗೆ ಒಂದೇ ಕುಟುಂಬದ ಹೆಸರನ್ನು ಇಡುವ ಸಂಪ್ರದಾಯವಿತ್ತು. ಆದರೆ ನಮ್ಮ ಸರ್ಕಾರ ದೇಶದ ಮಹನೀಯರ ಹೆಸರನ್ನು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ಪರಂಪರೆಯನ್ನು ಆರಂಭಿಸಿದೆ ಎಂದು ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ವಿಮಾನ ನಿಲ್ದಾಣ
ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವಿಮಾನ ನಿಲ್ದಾಣದಲ್ಲಿ ಕೃತಕ ಬುದ್ಧಿಮತ್ತೆ (AI), ಬಿಲ್ಡಿಂಗ್ ಇನ್ಫರ್ಮೇಷನ್ ಮಾಡೆಲಿಂಗ್ (BIM), ಬಯೋಮೆಟ್ರಿಕ್ ಪ್ರಯಾಣಿಕರ ಸೇವೆ, ಸ್ವಯಂಚಾಲಿತ ಬ್ಯಾಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆ, 5 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಘಟಕ, ಮಳೆನೀರು ಸಂಗ್ರಹ ಹಾಗೂ ಇವಿ ಚಾರ್ಜಿಂಗ್ ಸೌಲಭ್ಯಗಳು ಅಳವಡಿಸಲಾಗಿದೆ. ವಿಮಾನ ನಿಲ್ದಾಣದ ವಿನ್ಯಾಸವು ಅರಕು ಕಣಿವೆಯ ಸಾಂಪ್ರದಾಯಿಕ ಗುಡಿಸಲುಗಳು ಮತ್ತು ಹಾರುವ ಮೀನಿನ ಆಕಾರದಿಂದ ಸ್ಫೂರ್ತಿ ಪಡೆದಿದೆ.
ಕಾರ್ಯಕ್ರಮದ ವೇಳೆ 13,500ಕ್ಕೂ ಹೆಚ್ಚು ಆದಿವಾಸಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಧಿಮ್ಸಾ ನೃತ್ಯ ಪ್ರದರ್ಶಿಸುವ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದರು. ಈ ಸಾಂಸ್ಕೃತಿಕ ಪ್ರದರ್ಶನವನ್ನು ಮೆಚ್ಚಿದ ಪ್ರಧಾನಿ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಭಿವೃದ್ಧಿ ಮತ್ತು ಸಂಸ್ಕೃತಿಯ ಸಮತೋಲನದ ದೃಷ್ಟಿಕೋನವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಆಂಧ್ರ ಪ್ರದೇಶದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 460 ಕೋಟಿ ರೂ ಗೂ ಅಧಿಕ ವೆಚ್ಚದ ಈ ಘಟಕವು ವರ್ಷಕ್ಕೆ 9.6 ಕೋಟಿ ಚಿಪ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇದರ ಜೊತೆಗೆ 9,900 ಕೋಟಿ ರೂ ಗೂ ಅಧಿಕ ಮೌಲ್ಯದ ಪವರ್‌ಗ್ರಿಡ್ ವಿದ್ಯುತ್ ಪ್ರಸರಣ ಯೋಜನೆಗಳು, 5,550 ಕೋಟಿ ರೂ. ವೆಚ್ಚದ ಕರ್ನೂಲ್-ಐವಿ ನವೀಕರಿಸಬಹುದಾದ ಇಂಧನ ಯೋಜನೆ, ಹಾಗೂ 1,880 ಕೋಟಿ ರೂ. ಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಯೋಜನೆಗಳು ರಾಜ್ಯದ ಮೂಲಸೌಕರ್ಯ, ಕೈಗಾರಿಕೆ, ಉದ್ಯೋಗ ಹಾಗೂ ಹೂಡಿಕೆಗೆ ಹೊಸ ಉತ್ತೇಜನ ನೀಡಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
