ನವದೆಹಲಿ ಜುಲೈ (02): ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದ ಆರೋಪದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಕ್ಷಮಿಸಿದ ಹಿನ್ನೆಲೆಯಲ್ಲಿ ಆಕೆಯ ತಾಯಿ ಪ್ರಧಾನಿ ಮೋದಿಗೆ ಭಾವುಕ ಧನ್ಯವಾದ ಸಲ್ಲಿಸಿದ್ದಾರೆ.
ಬಾಲಕಿಯ ತಾಯಿ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಕಿಯ ತಾಯಿ, “ಪ್ರಧಾನಿ ಮೋದಿ ಅವರು ನನ್ನ ಮಗಳನ್ನು ಕ್ಷಮಿಸುವ ಮೂಲಕ ಆಕೆಗೆ ಹೊಸ ಜೀವನ ನೀಡಿದ್ದಾರೆ. ದೇಶದ ಪ್ರಧಾನಿಯಾಗಿ ಅವರು ತೋರಿದ ದೊಡ್ಡ ಮನಸ್ಸಿಗೆ ನಾನು ಕೈಮುಗಿದು ಧನ್ಯವಾದ ಹೇಳುತ್ತೇನೆ. ಇಂದು ನನ್ನ ಮಗಳ ಹುಟ್ಟುಹಬ್ಬವಾಗಿದ್ದು, ಇದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ” ಎಂದು ಹೇಳಿದರು.
ಅವರು ಮುಂದುವರಿದು, ಪ್ರತಿಭಟನೆಯ ವೇಳೆ ನಡೆದ ಘಟನೆಗೆ ಕುಟುಂಬ ವಿಷಾದ ವ್ಯಕ್ತಪಡಿಸುತ್ತಿದ್ದು, ತಮ್ಮ ಮಗಳಿಗೆ ತಪ್ಪಿನ ಅರಿವು ಆಗಿದೆ ಎಂದರು. ಇದೇ ವೇಳೆ, ಮಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಪಡಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದರು. “ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದೇವೆ. ತಪ್ಪಾಗಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಿದರೆ ನನ್ನ ಮಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಈ ಪ್ರಕರಣವು ದೆಹಲಿಯಲ್ಲಿ ನಡೆದ ನೀಟ್ ಪ್ರತಿಭಟನೆಯ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪಕ್ಕೆ ಸಂಬಂಧಿಸಿದೆ. ಘಟನೆಯ ನಂತರ ಬಾಲಕಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿ, ಇತರರ ಪ್ರಭಾವಕ್ಕೆ ಒಳಗಾಗಿ ತಪ್ಪು ನಡೆದುಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಳು. “ನನಗೆ ಇನ್ನೂ 15 ವರ್ಷ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ದೇಶದ ಜನರು ಹಾಗೂ ಪ್ರಧಾನಿ ಮೋದಿ ಅವರು ನನ್ನನ್ನು ಕ್ಷಮಿಸಬೇಕು” ಎಂದು ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಳು.
ಸಲಹೆಯನ್ನೂ ಮುಂದಿಟ್ಟ ಬಾಲಕಿಯ ತಾಯಿ
ಬಾಲಕಿಯ ತಾಯಿ ಮತ್ತೊಂದು ಮಹತ್ವದ ಸಲಹೆಯನ್ನೂ ಮುಂದಿಟ್ಟಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Instagram ಮತ್ತು Facebook ಬಳಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳು ಸುಲಭವಾಗಿ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಅವರ ಗಮನ ಶಿಕ್ಷಣದತ್ತ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ನಡುವೆ, ಪ್ರತಿಭಟನೆಗಳ ವೇಳೆ ತಮ್ಮ ವಿರುದ್ಧ ಕೇಳಿಬಂದ ಅವಾಚ್ಯ ಘೋಷಣೆಗಳ ಕುರಿತು ಪ್ರಧಾನಿ ಮೋದಿ ಸಹ ಕ್ಷಮೆಯ ಮನೋಭಾವ ವ್ಯಕ್ತಪಡಿಸಿದ್ದರು. “ಅವಾಚ್ಯ ಪದಗಳಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ತಪ್ಪು ದಾರಿಗೆ ಹೋದ ಮಕ್ಕಳಿಗೆ ಶಿಕ್ಷೆ ನೀಡುವುದಕ್ಕಿಂತ ಸರಿಯಾದ ದಾರಿ ತೋರಿಸುವುದು ಸಮಾಜದ ಜವಾಬ್ದಾರಿ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಹೇಳಿದ್ದಾರೆ.
