ಜನ್ಮದಿನದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಯಶೋಭೂಮಿಯಲ್ಲಿ ಸೆಮಿಕಾನ್ ಇಂಡಿಯಾ 2026ರ 5ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದ ಪ್ರಮುಖ ಕಂಪನಿಗಳು, ನೀತಿ ನಿರೂಪಕರು, ಹೂಡಿಕೆದಾರರು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಹಾಗೂ ಶೈಕ್ಷಣಿಕ ವಲಯದ ಪ್ರತಿನಿಧಿಗಳು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗುರುವಾರ ಆರಂಭವಾಗುವ ಮೂರು ದಿನಗಳ ಈ ಕಾರ್ಯಕ್ರಮ ಸೆಪ್ಟೆಂಬರ್ 19ರವರೆಗೆ ನಡೆಯಲಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಜಾಗತಿಕ ಉದ್ಯಮ ಸಂಘಟನೆಯಾದ SEMI ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿವೆ.
‘Silicon to Systems: Building the Ecosystem’ ಎಂಬ ಮುಖ್ಯ ಥೀಮ್‌ನಡಿ ನಡೆಯುತ್ತಿರುವ ಸೆಮಿಕಾನ್ ಇಂಡಿಯಾ 2026, ದೇಶದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ವೇದಿಕೆಯಾಗಿದೆ. ನೀತಿ ಬೆಂಬಲ, ಉದ್ಯಮದ ಹೆಚ್ಚುತ್ತಿರುವ ಹೂಡಿಕೆ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳ ಅಗತ್ಯದಿಂದ ಭಾರತಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.
ಸುಮಾರು 15,000 ಚದರ ಮೀಟರ್‌ಗಳ ಪ್ರದರ್ಶನ ಪ್ರದೇಶದಲ್ಲಿ 600ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಇವರಲ್ಲಿ ಸುಮಾರು 300 ಅಂತಾರಾಷ್ಟ್ರೀಯ ಕಂಪನಿಗಳೂ ಸೇರಿವೆ. ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಪ್ರಮುಖ ಬೆಳವಣಿಗೆಗಳು ಹಾಗೂ ಸವಾಲುಗಳ ಕುರಿತು ನಡೆಯುವ ಚರ್ಚೆಗಳಲ್ಲಿ 150ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುವ ನಿರೀಕ್ಷೆಯಿದೆ.
ಆರು ದೇಶಗಳ ಪೆವಿಲಿಯನ್‌ಗಳು ಹಾಗೂ 12 ರಾಜ್ಯ ಸರ್ಕಾರಗಳ ಪೆವಿಲಿಯನ್‌ಗಳು ಪ್ರದರ್ಶನದ ಪ್ರಮುಖ ಭಾಗವಾಗಿವೆ. ಸುಮಾರು 40 ಸ್ಟಾರ್ಟ್‌ಅಪ್‌ಗಳು ತಮ್ಮ ತಂತ್ರಜ್ಞಾನ ಮತ್ತು ನವೀನ ಆಲೋಚನೆಗಳನ್ನು ಪ್ರದರ್ಶಿಸಲಿರುವ ಸ್ಟಾರ್ಟ್‌ಅಪ್ ಪೆವಿಲಿಯನ್ ಕೂಡ ಇರಲಿದೆ. ಜೊತೆಗೆ ವಿದ್ಯಾರ್ಥಿಗಳು, ನಾವೀನ್ಯತೆ, ಕೌಶಲ್ಯಾಭಿವೃದ್ಧಿ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ವಿಶೇಷ ವೇದಿಕೆಗಳನ್ನು ರೂಪಿಸಲಾಗಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘Sand to Silicon to Systems’ ಮೌಲ್ಯ ಸರಪಳಿ ಅನುಭವ ಇರಲಿದೆ. ಕಚ್ಚಾ ವಸ್ತುಗಳು ಮತ್ತು ಉತ್ಪಾದನೆಯಿಂದ ಹಿಡಿದು ಸುಧಾರಿತ ಪ್ಯಾಕೇಜಿಂಗ್, ಚಿಪ್ ವಿನ್ಯಾಸ, ಎಲೆಕ್ಟ್ರಾನಿಕ್ಸ್ ಹಾಗೂ ಸಿಸ್ಟಮ್‌ಗಳವರೆಗಿನ ಸಂಪೂರ್ಣ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಇದು ಪರಿಚಯಿಸಲಿದೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳ ಸಿಇಒಗಳೊಂದಿಗೆ ದುಂಡು ಮೇಜಿನ ಸಭೆ ನಡೆಸಿದ್ದರು. ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಮುಂದಿನ ಹಂತದ ಬೆಳವಣಿಗೆಯಲ್ಲಿ ಉದ್ಯಮದ ಹೆಚ್ಚಿನ ಸಹಭಾಗಿತ್ವಕ್ಕೆ ಅವರು ಕರೆ ನೀಡಿದ್ದರು. ಕೌಶಲ್ಯಾಭಿವೃದ್ಧಿ, ನಾವೀನ್ಯತೆ, ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೂಡಿಕೆ ಹೆಚ್ಚಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದ್ದಾರೆ.
ಸಭೆಯಲ್ಲಿ SEMI, Micron, Infineon, Applied Materials, ASML, AMD, Intel, Tata Electronics, Foxconn, NXP, IBM Research ಸೇರಿದಂತೆ ಹಲವು ಜಾಗತಿಕ ಹಾಗೂ ಭಾರತೀಯ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
