ನೇಪಾಳ ಪ್ರವಾಹಕ್ಕೆ ಮೋದಿ ಸಂತಾಪ: ದೂರವಾಣಿ ಮೂಲಕ ಬಾಲೆನ್ ಶಾ ಜೊತೆ ಮಾತುಕತೆ

Untitled design (40)

ನವದೆಹಲಿ ಆ.26: ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿ ಜೀವಹಾನಿ ಹಾಗೂ ವ್ಯಾಪಕ ಆಸ್ತಿ ಹಾನಿಯಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಾಲೇಂದ್ರ ಶಾ (ಬಾಲೆನ್ ಶಾ) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಪ್ರವಾಹದಿಂದ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಸಂಕಷ್ಟದ ಸಮಯದಲ್ಲಿ ನೇಪಾಳಕ್ಕೆ ಭಾರತ ಸಾಧ್ಯವಿರುವ ಎಲ್ಲ ಮಾನವೀಯ ನೆರವು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ‘ಎಕ್ಸ್‌’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ಈ ಕಷ್ಟದ ಸಮಯದಲ್ಲಿ ಭಾರತದ ಜನರು ನೇಪಾಳದಲ್ಲಿರುವ ತಮ್ಮ ಸಹೋದರ-ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ” ಎಂದು ಹೇಳಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಉಭಯ ದೇಶಗಳ ತಂಡಗಳು ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ಪ್ರವಾಹ

ಸ್ಥಳೀಯ ಕಾಲಮಾನ ಇಂದು ಬುಧವಾರ ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಟಿಬೆಟ್ ಕಡೆಯಿಂದ ಹರಿದುಬರುವ ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಉಂಟಾಗಿದೆ. ಇದರ ಪರಿಣಾಮ ಟಿಬೆಟ್ ಗಡಿಗೆ ಹೊಂದಿಕೊಂಡಿರುವ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಹಾಗೂ ಕಠ್ಮಂಡುವಿನ ನೈಋತ್ಯದಲ್ಲಿರುವ ನುವಕೋಟ್ ಜಿಲ್ಲೆಗಳು ತೀವ್ರವಾಗಿ ಹಾನಿಗೊಳಗಾಗಿವೆ.

ಪ್ರವಾಹದ ರಭಸಕ್ಕೆ ಮನೆಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಕೆಲವೆಡೆ ರಸ್ತೆಗಳು ಮತ್ತು ಹೆದ್ದಾರಿಗಳ ಸಂಚಾರವೂ ಸ್ಥಗಿತಗೊಂಡಿದೆ. ಭಾರೀ ಪ್ರಮಾಣದ ಕೆಸರು ಹಾಗೂ ನೀರು ನುಗ್ಗಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ.

384 ಮಂದಿ ನಾಪತ್ತೆ

ಅಧಿಕಾರಿಗಳ ಪ್ರಕಾರ, ಭಾರತ, ಅಮೆರಿಕ, ಬ್ರಿಟನ್ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ 291 ಮಂದಿ ಪ್ರವಾಸಿಗರು ಸೇರಿ ಒಟ್ಟು 384 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರವಾಹದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೀಡಿತ ಪ್ರದೇಶಗಳಿಗೆ ನೇಪಾಳ ಸೇನೆ ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಿದೆ. ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

430 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಹಾನಿ

ಪ್ರವಾಹದಿಂದ ಜಲವಿದ್ಯುತ್ ಹಾಗೂ ಸೌರಶಕ್ತಿ ಸೌಲಭ್ಯಗಳು ಸೇರಿದಂತೆ ಸುಮಾರು 430 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹಾನಿಗೊಳಗಾಗಿದೆ ಎಂದು ನೇಪಾಳ ವಿದ್ಯುತ್ ಪ್ರಾಧಿಕಾರ ತಿಳಿಸಿದೆ.

ಉತ್ಪಾದನೆ, ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಳಿಗೆ ಹಾನಿಯಾಗಿರುವುದರಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ಹೆದ್ದಾರಿಗಳನ್ನೂ ಮುಚ್ಚಲಾಗಿದ್ದು, ಜನರ ಸಂಚಾರಕ್ಕೆ ತೊಂದರೆಯಾಗಿದೆ.

ನೇಪಾಳದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನಡೆಯುವ ಮುಂಗಾರು ಅವಧಿಯಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಸಾಮಾನ್ಯವಾಗಿವೆ. ಹವಾಮಾನ ಬದಲಾವಣೆಯಿಂದ ಇಂತಹ ಹವಾಮಾನ ವೈಪರೀತ್ಯಗಳ ಆವರ್ತನೆ ಮತ್ತು ತೀವ್ರತೆ ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Exit mobile version