ಭಾರತದ ವಿರುದ್ಧ ಯುದ್ಧ ಸಾಧ್ಯ..!! ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್

Untitled design 2025 10 08t200656.948

ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಭಾರತದ ವಿರುದ್ಧ ಯುದ್ಧದ ಸಾಧ್ಯತೆ ಇದೆ ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ. ‘ಸಮಾ’ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, ಭಾರತದ ವಿರುದ್ಧ ಸೇನಾ ಸಂಘರ್ಷದ ಬೆದರಿಕೆ ಇದೆ ಮತ್ತು ಪಾಕಿಸ್ತಾನ ಪಡೆಗಳು ಕಾವಲು ಕಾಯುತ್ತಿವೆ ಎಂದು ತಿಳಿಸಿದರು.

“ಉದ್ವಿಗ್ನತೆ ಹೆಚ್ಚಾಗುವುದು ಬೇಡ. ಆದರೆ ಬೆದರಿಕೆ ಇರುವುದು ನಿಜ. ನಾನು ಅದನ್ನು ನಿರಾಕರಿಸುತ್ತಿಲ್ಲ. ಯುದ್ಧ ಎದುರಾದರೆ ದೇವರ ದಯೆಯಿಂದ ಹಿಂದಿಗಿಂತಲೂ ಉತ್ತಮ ಫಲಿತಾಂಶ ಪಡೆಯಲಿದ್ದೇವೆ ಎಂದು ಆಸಿಫ್ ಹೇಳಿದರು.

ಆಸಿಫ್ ಅವರು ಭಾರತದ ಐತಿಹಾಸಿಕ ಮತ್ತು ರಾಜಕೀಯ ಸ್ಥಿತಿಯ ಬಗ್ಗೆಯೂ ಟೀಕೆ ಮಾಡಿ, ಮೇ ತಿಂಗಳಲ್ಲಿ ನಡೆದ ಸಂಘರ್ಷದ ಬಳಿಕ ಭಾರತವು ತನ್ನ ಪರವಾಗಿದ್ದ ದೇಶಗಳ ಬೆಂಬಲವನ್ನು ಕಳೆದುಕೊಂಡಿತು. ಪಾಕಿಸ್ತಾನ ಹೆಚ್ಚಿನ ಸಂಖ್ಯೆಯ ಮಿತ್ರರಾಷ್ಟ್ರಗಳ ಬೆಂಬಲವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯ ಹೊರತಾಗಿ ಭಾರತದಲ್ಲಿ ಎಂದೂ ಒಗ್ಗಟ್ಟು ಇರಲಿಲ್ಲ ಎಂದು ಟೀಕಿಸಿದರು.ಜೊತೆಗೆ ನಾವು ಪರಸ್ಪರ ವಾದ ಮಾಡುತ್ತೇವೆ, ಸ್ಪರ್ಧಿಸುತ್ತೇವೆ ಆದರೆ ಯುದ್ಧದ ವಿಚಾರಕ್ಕೆ ಬಂದಾಗ ನಾವು ಒಗ್ಗಟ್ಟಾಗಿರುತ್ತೇವೆ ಎಂದರು.

ಪಾಕಿಸ್ತಾನದ ಈ ಹೇಳಿಕೆಗಳು ಬಂದ ಸಮಯದಲ್ಲಿ, ಇತ್ತೀಚೆಗಷ್ಟೇ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನವನ್ನು ಮತ್ತೆ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದ್ದರು.ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎ.ಪಿ.ಸಿಂಗ್ ಅವರು ‘ಸಿಂಧೂರ್’ ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ತಾನದ 11 ರಿಂದ 12 ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿತ್ತು ಎಂದು ಹೇಳಿಕೆ ನೀಡಿದ್ದರು.

ಏಪ್ರಿಲ್ 22ರಂದು ಪಹಲ್‌ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧ ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ನಾಲ್ಕು ದಿನಗಳ ಕಾಲ ಸಂಘರ್ಷ ಮುಂದುವರಿದಿದ್ದು, ಮೇ 10ರಂದು ಕದನ ವಿರಾಮ ಏರ್ಪಟ್ಟಿತ್ತು.

Exit mobile version