ನೇಪಾಳ ಜಲಪ್ರಳಯ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ, ಸದ್ಗುರು ಕಳವಳ

Untitled design (57)

ಕಠ್ಮಂಡು ಆ.27: ಟಿಬೆಟ್–ನೇಪಾಳ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ಭಾರೀ ಅನಾಹುತ ಸೃಷ್ಟಿಸಿದ್ದು, ಕೈಲಾಸ ಮಾನಸ ಸರೋವರ ಯಾತ್ರೆಯಿಂದ ವಾಪಸ್ ಬರುತ್ತಿದ್ದ ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂದು ಸದ್ಗುರು ಕಳವಳ ವ್ಯಕ್ತಪಡಿಸಿದ್ದಾರೆ.

ಟಿಬೆಟ್‌ನ ಗೈರಾಂಗ್ ಪ್ರದೇಶದಲ್ಲಿ ಪ್ರವಾಹ ಸಂಭವಿಸಿದ ವೇಳೆ ಯಾತ್ರಿಕರ ತಂಡ ವಲಸೆ ಕಚೇರಿಯಲ್ಲಿತ್ತು ಎಂದು ಸದ್ಗುರು ತಿಳಿಸಿದ್ದಾರೆ. ಭಾರೀ ಪ್ರಮಾಣದ ನೀರು ಏಕಾಏಕಿ ನುಗ್ಗಿದ ಪರಿಣಾಮ ವಲಸೆ ಕಚೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಕಟ್ಟಡಗಳು ಹಾಗೂ ಪ್ರದೇಶಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎನ್ನಲಾಗಿದೆ.

ಸದ್ಗುರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ತಮ್ಮ ಕೈಲಾಸ ಯಾತ್ರಾ ತಂಡವೊಂದು ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವವರ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಸದ್ಗುರು ತಿಳಿಸಿದ್ದಾರೆ. ಆದರೆ, ಪ್ರವಾಹದಿಂದ ರಸ್ತೆಗಳು ಹಾಗೂ ಸಂಪರ್ಕ ವ್ಯವಸ್ಥೆಗಳು ಹಾನಿಗೊಳಗಾಗಿರುವುದರಿಂದ ಸ್ಥಳಕ್ಕೆ ತಲುಪುವುದು ಸವಾಲಾಗಿದೆ ಎಂದು ಹೇಳಿದ್ದಾರೆ.

ತಮ್ಮ ಯಾತ್ರಾ ತಂಡಗಳ ಪೈಕಿ ಹಲವರು ಈಗಾಗಲೇ ಸುರಕ್ಷಿತವಾಗಿ ಮರಳಿದ್ದಾರೆ. ಇನ್ನೂ ಕೆಲವರು ಟಿಬೆಟ್ ಮತ್ತು ನೇಪಾಳದ ವಿವಿಧ ಪ್ರದೇಶಗಳಲ್ಲಿ ಇರುವುದಾಗಿ ಸದ್ಗುರು ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವವರ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರ ನೋವನ್ನು ತಾವು ಅರ್ಥಮಾಡಿಕೊಂಡಿದ್ದು, ಸಾಧ್ಯವಾದ ಎಲ್ಲ ನೆರವು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

ಇದೇ ವೇಳೆ ನೇಪಾಳದ ರಸುವಾ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹದ ರೌದ್ರಾವತಾರ ಮುಂದುವರಿದಿದೆ. ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದ್ದು, ಮನೆಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಪ್ರವಾಹದ ಪರಿಣಾಮ ನೂರಾರು ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಗಳು ತಿಳಿಸಿದೆ.

ನೇಪಾಳದ ಅಧಿಕಾರಿಗಳು ಸೇನೆ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದ್ದಾರೆ. ಹೆಲಿಕಾಪ್ಟರ್‌ಗಳ ಮೂಲಕವೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಪ್ರತಿಕೂಲ ಹವಾಮಾನ ಮತ್ತು ಹಾನಿಗೊಳಗಾದ ಸಂಪರ್ಕ ಮಾರ್ಗಗಳು ಕಾರ್ಯಾಚರಣೆಗೆ ಅಡ್ಡಿಯಾಗಿವೆ.

ಪ್ರವಾಹಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಭಾರೀ ಮಳೆ, ಹಿಮನದಿ ಪ್ರದೇಶದಲ್ಲಿ ನೀರಿನ ಏರಿಕೆ ಅಥವಾ ಹಿಮನದಿ ಸರೋವರ ಸ್ಫೋಟ ಪ್ರವಾಹ (GLOF) ಕಾರಣವಾಗಿರಬಹುದೇ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version