ನವದೆಹಲಿ, ಆಗಸ್ಟ್ 24: ಜುಲೈ 25 ರಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತೆ ಪ್ರತಿಭಟನೆಗೆ ಸಜ್ಜಾಗಿದೆ. ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಯುವಜನ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಸಂಘಟನೆ ಘೋಷಿಸಿದೆ.
ದೆಹಲಿಯ ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಿಜೆಪಿ ತಿಳಿಸಿದೆ. ಮೃತ ನೀಟ್ ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಈ ಹಿಂದೆ ಪ್ರತಿಭಟನೆ ವೇಳೆ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯನ್ನು ಮುನ್ನಡೆಸಲಿದ್ದು, ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸಲಿದ್ದಾರೆ ಎಂದು ಸಂಘಟನೆ ಹೇಳಿದೆ.
ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳನ್ನು ಖಂಡಿಸಿ ಜೂನ್ 20ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆರಂಭಿಸಿತ್ತು. ಬಳಿಕ ಹೋರಾಟ ದೇಶದ ಹಲವು ಭಾಗಗಳಿಗೆ ವಿಸ್ತರಿಸಿತ್ತು. ಜುಲೈ 20ರಂದು ಸಂಸತ್ತಿನತ್ತ ಪ್ರತಿಭಟನಾ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಕೂಡಾ ನೀಡಿದ್ದರು.
ನಂತರ ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ಕೆಲವು ಬೇಡಿಕೆಗಳಿಗೆ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಜುಲೈ 25ರಂದು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ನೀಟ್ ಪರೀಕ್ಷೆಯ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರ, ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಹಾಗೂ ಪರೀಕ್ಷಾ ಸುಧಾರಣೆಗಳ ಕುರಿತು ಚರ್ಚೆ ನಡೆಸುವುದು ಸೇರಿದಂತೆ ಹಲವು ಬೇಡಿಕೆಗಳು ಈ ಮಾತುಕತೆಯಲ್ಲಿದ್ದವು ಎಂದು ಸಿಜೆಪಿ ಹೇಳಿದೆ.
ಆದರೆ, ನೀಡಿದ್ದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ, ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ಬದ್ಧತೆ ತೋರಿಲ್ಲ ಎಂದು ಸಿಜೆಪಿ ದೂರಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರ ಮೆರವಣಿಗೆಯ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿರುವುದಾಗಿ ಸಂಘಟನೆ ತಿಳಿಸಿದೆ. ಯುವಜನರ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನೂ ಸಿಜೆಪಿ ನೀಡಿದೆ.
