ಉತ್ತರ ಕನ್ನಡ: ಜಿಲ್ಲೆಯ ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿರುವ ಮತ್ತೊಂದು ದುರಂತ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದೆ. ಬೋಟ್ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವ ವೇಳೆ ವಿಷಾನಿಲ ಸೋರಿಕೆಯಾಗಿ ಇಬ್ಬರು ಮೀನುಗಾರರು ಉಸಿರುಗಟ್ಟಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಕೇವಲ ಕೆಲವೇ ದಿನಗಳ ಹಿಂದೆ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿ ಇದೇ ರೀತಿಯ ಘಟನೆಯಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಹೆಚ್ಚಿಸಿದೆ.
ಮುದಗಾ ಬಂದರಿನಲ್ಲಿ ಬೇಲೆಕೇರಿ ಮೂಲದ ‘ಮೂಕಾಂಬಿಕಾ’ ಹೆಸರಿನ ಬೋಟ್ನಲ್ಲಿ ಈ ಘಟನೆ ನಡೆದಿದೆ. ಬೋಟ್ನಲ್ಲಿ ಚಮನ್ ಜಾತಿಯ ಮೀನುಗಳನ್ನು ಶಿಕಾರಿ ಮಾಡಿ ಬಂದರಿಗೆ ಮರಳಿದ್ದ ಮೀನುಗಾರರು, ಶೇಖರಣಾ ಘಟಕದಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಘಟಕದೊಳಗಿನಿಂದ ತೀವ್ರ ದುರ್ವಾಸನೆಯೊಂದಿಗೆ ವಿಷಾನಿಲ ಹೊರಹೊಮ್ಮಿದೆ ಎನ್ನಲಾಗಿದೆ.
ವಿಷಾನಿಲದ ಪರಿಣಾಮ ಒರಿಸ್ಸಾ ಮೂಲದ ಇಬ್ಬರು ಮೀನುಗಾರರು ಸ್ಥಳದಲ್ಲೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಮೃತರನ್ನು ಪುರಂದರ ಬಿಸರಾ (21) ಹಾಗೂ ಆಕಾಶ ನಾಯ್ಕ (24) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೀನುಗಾರ ಲಾಲಿಂದರ ಧ್ರುವ (41) ಅವರು ವಿಷಾನಿಲದಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವೇಳೆ ಬೋಟ್ನಲ್ಲಿದ್ದ ಮತ್ತಿಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಶೇಖರಣಾ ಘಟಕದೊಳಗೆ ಸ್ವಚ್ಛತಾ ಕಾರ್ಯ ನಡೆಸುವ ಸಂದರ್ಭದಲ್ಲಿ ವಿಷಾನಿಲ ಸೋರಿಕೆಯಾಗಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ಕಾರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮೂರು ದಿನಗಳ ಅಂತರದಲ್ಲೇ ಮತ್ತೊಂದು ದುರಂತ
ಮುದಗಾ ಬಂದರಿನ ಈ ಘಟನೆಗೂ ಮುನ್ನ ಕೇವಲ ಮೂರು ದಿನಗಳ ಹಿಂದೆ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಚಮನ್ ಮೀನಿನಿಂದ ಉಂಟಾದ ವಿಷಾನಿಲದ ದುರ್ವಾಸನೆಗೆ ಸಿಲುಕಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.
ಬೋಟ್ಗಳ ಶೇಖರಣಾ ಘಟಕಗಳಲ್ಲಿ ಮೀನು ಸಂಗ್ರಹಿಸುವ ಹಾಗೂ ನಂತರ ಅವುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾರ್ಮಿಕರು ಹಾಗೂ ಮೀನುಗಾರರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವನ್ನು ಈ ಸರಣಿ ಘಟನೆಗಳು ತೋರಿಸಿವೆ. ಮುಚ್ಚಿದ ಶೇಖರಣಾ ಘಟಕಗಳೊಳಗೆ ಪ್ರವೇಶಿಸುವ ಮೊದಲು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಒಂದೇ ರೀತಿಯ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಬಂದರುಗಳು ಹಾಗೂ ಬೋಟ್ಗಳ ಶೇಖರಣಾ ಘಟಕಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಎದುರಾಗಿದೆ. ಮೀನುಗಾರರ ಜೀವ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ, ತರಬೇತಿ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಆಗ್ರಹವೂ ಹೆಚ್ಚಾಗಿದೆ.
