ಕಳೆದ ವರ್ಷ ಕೋಲ್ಕತ್ತಾದಲ್ಲಿ ನಡೆದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ವೇಳೆ ಉಂಟಾದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳಿಗೆ ಹಣ ಮರುಪಾವತಿಸಲು ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿದೆ. ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಟಿಕೆಟ್ ಖರೀದಿಸಿದ್ದ ಒಟ್ಟು 33 ಸಾವಿರ ಅಭಿಮಾನಿಗಳಿಗೆ ಹಣವನ್ನು ರಿಫಂಡ್ ಮಾಡುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಶನಿವಾರ (ಆ.29) ಸಂಜೆ ರಾಜ್ಯ ಸಚಿವಾಲಯದ ಸಭಾಂಗಣದಲ್ಲಿ ನಡೆದ ಕ್ರೀಡಾಪಟುಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಮೆಸ್ಸಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಣ ಮರುಪಾವತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಟಿಕೆಟ್ ಖರೀದಿಸಿದ ಪ್ರತಿಯೊಬ್ಬರಿಗೂ ಶೀಘ್ರದಲ್ಲೇ ಹಣ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದರು.
ವಾಸ್ತವವಾಗಿ, ಕಳೆದ ವರ್ಷ ಡಿಸೆಂಬರ್ 13ರಂದು ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಮೆಸ್ಸಿಯನ್ನು ನೇರವಾಗಿ ನೋಡಲು ಪಶ್ಚಿಮ ಬಂಗಾಳ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದಲೂ ಸಾವಿರಾರು ಅಭಿಮಾನಿಗಳು ಕೋಲ್ಕತ್ತಾಗೆ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಟಿಕೆಟ್‌ಗಳು ಮಾರಾಟವಾಗಿದ್ದು, ಅಭಿಮಾನಿಗಳು ₹4,000, ₹6,000 ಮತ್ತು ₹8,000 ಸೇರಿದಂತೆ ವಿವಿಧ ದರದ ಟಿಕೆಟ್‌ಗಳನ್ನು ಖರೀದಿಸಿದ್ದರು.
ಆದರೆ ಕಾರ್ಯಕ್ರಮ ಆರಂಭವಾದ ಬಳಿಕ ನಿರೀಕ್ಷಿತ ರೀತಿಯಲ್ಲಿ ವ್ಯವಸ್ಥೆ ನಡೆಯದ ಕಾರಣ ಭಾರಿ ಗೊಂದಲ ಉಂಟಾಗಿತ್ತು. ಮೈದಾನಕ್ಕೆ ಆಗಮಿಸಿದ್ದ ಮೆಸ್ಸಿಯನ್ನು ಸಮೀಪದಿಂದ ನೋಡುವ ಅವಕಾಶ ಹಲವರಿಗೆ ಸಿಗಲಿಲ್ಲ. ಇದರಿಂದ ಆಕ್ರೋಶಗೊಂಡ ಕೆಲ ಅಭಿಮಾನಿಗಳು ಕುರ್ಚಿಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು. ಟಿಕೆಟ್‌ಗೆ ಪಾವತಿಸಿದ ಹಣವನ್ನು ಮರುಪಾವತಿಸುವಂತೆ ಆಯೋಜಕರನ್ನು ಒತ್ತಾಯಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ರಿಫಂಡ್ ಆಗಿರಲಿಲ್ಲ.
ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ
ಈ ವಿಚಾರವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೆಸ್ಸಿ ಕಾರ್ಯಕ್ರಮದಲ್ಲಿ ನಡೆದ ಅವ್ಯವಸ್ಥೆ ಮಾತ್ರವಲ್ಲದೆ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಳಿಗೂ ಹಿಂದಿನ ಸರ್ಕಾರವೇ ಕಾರಣ ಎಂದು ಟೀಕಿಸಿದರು. ಕಳೆದ ಕೆಲವು ವರ್ಷಗಳಿಂದ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ರಾಷ್ಟ್ರೀಯ ತಂಡಗಳಲ್ಲಿ ಪಶ್ಚಿಮ ಬಂಗಾಳದ ಕ್ರೀಡಾಪಟುಗಳ ಸಂಖ್ಯೆ ಮತ್ತು ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಮತ್ತು ಸಮರ್ಪಿತ ಯುವಜನರ ಕೊರತೆಯಿಲ್ಲ. ಆದರೆ ಸೂಕ್ತ ತರಬೇತಿ, ಮೂಲಸೌಕರ್ಯ ಹಾಗೂ ಸರ್ಕಾರದ ಬೆಂಬಲದ ಕೊರತೆಯಿಂದಾಗಿ ಪ್ರತಿಭೆಗಳು ರಾಷ್ಟ್ರಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ, ಒಡಿಶಾ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಕ್ರೀಡಾ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸುತ್ತಿವೆ ಎಂದರು.
294 ಕ್ಷೇತ್ರಗಳಲ್ಲಿ ಮಿನಿ ಒಳಾಂಗಣ ಕ್ರೀಡಾಂಗಣ
ರಾಜ್ಯದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಲ್ಲಿ ಆಧುನಿಕ ಮಿನಿ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸುವುದು ಸರ್ಕಾರದ ಯೋಜನೆಯಾಗಿದೆ ಎಂದು ಸುವೇಂದು ಅಧಿಕಾರಿ ಘೋಷಿಸಿದರು. ಮೊದಲ ವರ್ಷದಲ್ಲೇ 100 ಮಿನಿ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಇದರ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ಲಬ್‌ಗಳಿಗೆ ಪ್ರತಿ ವರ್ಷ ₹1 ಕೋಟಿ ಆರ್ಥಿಕ ನೆರವು ನೀಡುವ ಯೋಜನೆಯನ್ನೂ ಮುಖ್ಯಮಂತ್ರಿ ಪ್ರಕಟಿಸಿದರು. ಯುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಪಶ್ಚಿಮ ಬಂಗಾಳವನ್ನು ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶ ಸರ್ಕಾರಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 145 ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಅವರಿಗೆ ಒಟ್ಟು ₹4.31 ಕೋಟಿ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ ಆಯ್ದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ನೇಮಕಾತಿ ಪತ್ರಗಳನ್ನೂ ಹಸ್ತಾಂತರಿಸಿದರು.
