ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಲಿಯಲು 1 ವರ್ಷ ಗಡುವು ನೀಡಿದ ಫಡ್ನವೀಸ್

ಸರ್ಟಿಫಿಕೇಟ್ (13)

ಮುಂಬೈ, ಆಗಸ್ಟ್ 27: ಮಹಾರಾಷ್ಟ್ರ ಸರ್ಕಾರದ ಮರಾಠಿ ಭಾಷಾ ನಿಯಮದ ಕುರಿತು ರಾಜಕೀಯ ವಾಗ್ವಾದ ಮತ್ತು ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಮುಂದಿನ ಒಂದು ವರ್ಷದ ಅವಧಿಯಲ್ಲಿ ಮರಾಠಿ ಭಾಷೆಯ ಜ್ಞಾನ ಹೊಂದಿಲ್ಲ ಎಂಬ ಕಾರಣಕ್ಕೆ ಯಾವುದೇ ಚಾಲಕರ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಿಲ್ಲ. ಈ ಅವಧಿಯಲ್ಲಿ ಚಾಲಕರು ಮರಾಠಿ ಭಾಷೆಯ ಪ್ರಾಥಮಿಕ ಜ್ಞಾನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.

ಕ್ಯಾಬ್ ಮತ್ತು ಆಟೋ ಚಾಲಕರೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಪ್ರತಿಯೊಬ್ಬ ಚಾಲಕನೂ ಮರಾಠಿ ಕಲಿಯಬೇಕು ಎಂಬುದನ್ನು ಚಾಲಕರು ಒಪ್ಪಿಕೊಂಡಿದ್ದಾರೆ. ಆದರೆ ವಿವಿಧ ವಯೋಮಾನದವರು ಈ ವೃತ್ತಿಯಲ್ಲಿರುವುದರಿಂದ ತಕ್ಷಣವೇ ಭಾಷೆ ಕಲಿಯುವುದು ಕಷ್ಟವಾಗಲಿದೆ ಎಂದು ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಒಂದು ವರ್ಷದ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದು, ಸರ್ಕಾರ ಅದನ್ನು ಅಂಗೀಕರಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಏನಿದು ಮರಾಠಿ ಭಾಷಾ ನಿಯಮ?

ಇದಕ್ಕೂ ಮುನ್ನ ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮರಾಠಿ ಭಾಷೆಯ ಜ್ಞಾನವಿಲ್ಲದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬ್ಯುಸಿನೆಸ್ ಬ್ಯಾಡ್ಜ್‌ಗಳನ್ನು ಅಮಾನತುಗೊಳಿಸುವ ಕುರಿತು ಎಚ್ಚರಿಕೆ ನೀಡಿದ್ದರು.

ನಿಯಮದ ಪ್ರಕಾರ, ಮರಾಠಿ ತಿಳಿದಿಲ್ಲದ ಚಾಲಕರ ಬ್ಯಾಡ್ಜ್ ಅನ್ನು ಮೊದಲ ಹಂತದಲ್ಲಿ ಒಂದು ತಿಂಗಳ ಕಾಲ ಅಮಾನತುಗೊಳಿಸುವ ಪ್ರಸ್ತಾವವಿತ್ತು. ಈ ಅವಧಿಯಲ್ಲೂ ಭಾಷೆ ಕಲಿಯದಿದ್ದರೆ ಮತ್ತಷ್ಟು ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಒಟ್ಟು ನಾಲ್ಕು ತಿಂಗಳ ಬಳಿಕವೂ ಮರಾಠಿ ಕಲಿಯದಿದ್ದರೆ ಬ್ಯಾಡ್ಜ್ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು.

ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿ ನಾಲ್ವರು ಟ್ಯಾಕ್ಸಿ ಚಾಲಕರು ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 12ರಂದು ಹೊರಡಿಸಲಾದ ಸರ್ಕಾರದ ಅಧಿಸೂಚನೆಯು ಲಕ್ಷಾಂತರ ಬಡ ಹಾಗೂ ವಲಸೆ ಚಾಲಕರ ಜೀವನೋಪಾಯಕ್ಕೆ ತೊಂದರೆ ಉಂಟುಮಾಡಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

ನಿಯಮ ಜಾರಿಗೆ ತಡೆಯಾಜ್ಞೆ ನೀಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ನಡುವೆ ಸರ್ಕಾರ ಒಂದು ವರ್ಷದ ಕಾಲಾವಕಾಶ ನೀಡಿರುವುದರಿಂದ ಮರಾಠಿ ಭಾಷಾ ನಿಯಮದ ಕುರಿತ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

Exit mobile version