ಲಖನೌ: ತನಗಿಂತ ಓದಿನಲ್ಲಿ ಮುಂದಿದ್ದಾನೆ, ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಅಸೂಯೆಗೊಂಡು ಇತರೆ ಸಹಪಾಠಿಗಳು, ವಿದ್ಯಾರ್ಥಿಯೊಬ್ಬನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಯಾನಕ ಘಟನೆ ಉತ್ತರ ಪ್ರದೇಶದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸಂತ್ರಸ್ತ ವಿದ್ಯಾರ್ಥಿಯನ್ನು ಫರ್ಹಾದ್ ಅಲಿ ಎಂದು ಗುರುತಿಸಲಾಗಿದೆ. ಈತ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಓದಿನಲ್ಲಿ ಅತ್ಯಂತ ಚುರುಕಾಗಿದ್ದನು. ಕಾಲೇಜಿನ ಶಿಸ್ತು, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಉತ್ತಮ ನಡತೆಯಿಂದಾಗಿ ಫರ್ಹಾದ್ ಶಿಕ್ಷಕರ ಮತ್ತು ಇತರ ವಿದ್ಯಾರ್ಥಿಗಳ ಪ್ರೀತಿಪಾತ್ರನಾಗಿದ್ದನು. ಆದರೆ ಇದು ಇತರೆ ವಿದ್ಯಾರ್ಥಿಗಳಿಗೆ ಅಸೂಯೆ ಬರುವ ಹಾಗೆ ಮಾಡಿದೆ. ಫರ್ಹಾದ್‌ನ ಈ ಜನಪ್ರಿಯತೆಯನ್ನು ಸಹಿಸದ ಇಬ್ಬರು ಸಹಪಾಠಿಗಳು ಆತನ ವಿರುದ್ಧ ಅಸೂಯೆ ಬೆಳೆಸಿಕೊಂಡಿದ್ದರು.
ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ನೀಡಿರುವ ಹೇಳಿಕೆ ಬೆಚ್ಚಿಬೀಳಿಸುವಂತಿದೆ. ಫರ್ಹಾದ್ ಎಲ್ಲರ ಗಮನ ಸೆಳೆಯುತ್ತಿದ್ದಾನೆ, ಆತನ ಯಶಸ್ಸಿನಿಂದಾಗಿ ನಾವೆಲ್ಲರೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇವೆ. ಯಾರೂ ನಮ್ಮನ್ನು ಗುರುತಿಸುತ್ತಿಲ್ಲ ಎಂಬ ಕೀಳರಿಮೆ ಆರೋಪಿಗಳಲ್ಲಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ ವಿದ್ಯಾರ್ಥಿಗಳು, ಕೇವಲ ಹಲ್ಲೆ ಮಾಡುವುದಲ್ಲದೆ, ಆ ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲು ಸಂಚು ರೂಪಿಸಿದ್ದರು.
ಪರೀಕ್ಷೆ ಮುಗಿಸಿ ಫರ್ಹಾದ್ ಅಲಿ ಮನೆಗೆ ಮರಳುತ್ತಿದ್ದಾಗ, ಹೊಂಚು ಹಾಕಿದ್ದ ಆರೋಪಿಗಳು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಜ್ವಾಲೆಯಿಂದ ಫರ್ಹಾದ್ ತೀವ್ರವಾಗಿ ಕಿರುಚಾಡಿದ್ದು, ತಕ್ಷಣವೇ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್, ಫರ್ಹಾದ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸದರ್ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಲಾದ ಪೆಟ್ರೋಲ್ ಬಾಟಲಿ ಮತ್ತು ಲೈಟರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಅತ್ಯಂತ ಕ್ರೂರ ಕೃತ್ಯವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇತ್ತ ಕಾಲೇಜು ಆಡಳಿತ ಮಂಡಳಿಯೂ ಕಠಿಣ ಕ್ರಮ ಕೈಗೊಂಡಿದ್ದು, ಘಟನೆಯಲ್ಲಿ ಭಾಗಿಯಾದ ಒಬ್ಬ ವಿದ್ಯಾರ್ಥಿಯನ್ನು ತಕ್ಷಣವೇ ಕಾಲೇಜಿನಿಂದ ವಜಾಗೊಳಿಸಲಾಗಿದ್ದು, ಇನ್ನೊಬ್ಬನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕ್ಯಾಂಪಸ್ ಒಳಗೆ ಅಥವಾ ಹೊರಗೆ ಅಶಿಸ್ತು ಮತ್ತು ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಕಾಲೇಜು ಪ್ರೊಕ್ಟರಲ್ ಸಮಿತಿ ಎಚ್ಚರಿಸಿದೆ.
