ಹನಿಮೂನ್ ಪ್ರಕರಣ ಮಾಸುವ ಮುನ್ನವೇ ಪತಿ ಮತ್ತು ಎರಡನೇ ಪ್ರೇಮಿಯೊಂದಿಗೆ ಸೇರಿ ಮೊದಲ ಪ್ರಿಯತಮನ ಕೊಂದ ಮಹಿಳೆ

Untitled design (37)

ಲಖನೌ: ಉತ್ತರಪ್ರದೇಶದ ಲಖನೌನಲ್ಲಿ ಜೂನ್ 08ರಂದು ನಡೆದ ಆಘಾತಕಾರಿ ಘಟನೆಯೊಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ಮಧುಚಂದ್ರಕ್ಕೆಂದು ಕರೆದೊಯ್ದು ನವವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಸುದ್ದಿಯ ಆಘಾತದಿಂದ ಜನರು ಚೇತರಿಸುವ ಮುನ್ನವೇ, ರಹೀಮಾಬಾದ್‌ನಲ್ಲಿ ಮತ್ತೊಂದು ಭಯಾನಕ ಹತ್ಯೆ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ ಮತ್ತು ಎರಡನೇ ಪ್ರೇಮಿಯೊಂದಿಗೆ ಸೇರಿಕೊಂಡು ಮೊದಲನೇ ಪ್ರಿಯತಮನನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ರಹೀಮಾಬಾದ್‌ ನಿವಾಸಿ ವಿಜಯ್‌ ಕುಮಾರ್‌ ಅಲಿಯಾಸ್‌ ಗಪ್ಪು ಈ ದುರ್ದೈವಿಯಾಗಿದ್ದಾನೆ. ಜೂನ್ 8 ರಂದು ಗಪ್ಪುವಿನ ಶವ ಆತನ ಮನೆಯ ಬಳಿ ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಕುಂತಿ ರಾವತ್‌, ಆಕೆಯ ಪತಿ ರಾಂಭಜನ್‌ ಮತ್ತು ಜಬ್ಬಾರ್‌ ಎಂಬವರನ್ನು ಆರೋಪಿಗಳಾಗಿ ಬಂಧಿಸಿದ್ದಾರೆ.

ಗಪ್ಪುವಿನ ಪತ್ನಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಆ ನಂತರ ಗಪ್ಪು ತನ್ನ ಸಂಬಂಧಿಯಾದ ರಾಂಭಜನ್‌ನ ಪತ್ನಿ ಕುಂತಿ ರಾವತ್‌ ಜೊತೆಗೆ ಪ್ರೇಮ ಸಂಬಂಧ ಬೆಳೆಸಿದ್ದ. ಕುಂತಿ ತನ್ನ ಪತಿ ರಾಂಭಜನ್‌ಗೆ ಊಟದಲ್ಲಿ ಮದ್ಯ ಸೇರಿಸಿ ಮತ್ತು ಬರಿಸಿ, ಗಪ್ಪು ಜೊತೆ ಸಮಯ ಕಳೆಯುತ್ತಿದ್ದಳು. ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದರು. ಈ ಸಂಬಂಧದ ವಿಷಯ ಕುಟುಂಬದಲ್ಲಿ ತಿಳಿದಾಗ ಗಲಾಟೆ ಉಂಟಾಯಿತು.

ಕೆಲವು ಕಾಲದ ನಂತರ ಕುಂತಿ ಜಬ್ಬಾರ್‌ ಎಂಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಈ ವಿಷಯ ಗಪ್ಪುಗೆ ತಿಳಿದಾಗ ಆತ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕೋಪಗೊಂಡ ಕುಂತಿ, ತನ್ನ ಪತಿ ರಾಂಭಜನ್‌ ಮತ್ತು ಎರಡನೇ ಪ್ರೇಮಿ ಜಬ್ಬಾರ್‌ ಜೊತೆಗೆ ಸೇರಿಕೊಂಡು ಗಪ್ಪುವನ್ನು ಕೊಲೆಗೈದಳು. ಆರೋಪಿಗಳು ಗಪ್ಪುವಿನ ಕತ್ತು ಸೀಳಿ ಕೊಂದು, ಶವವನ್ನು ಆತನ ಮನೆಯ ಹತ್ತಿರ ಎಸೆದಿದ್ದಾರೆ.

ಪೊಲೀಸರ ತನಿಖೆಯಲ್ಲಿ ಕುಂತಿಯ ಈ ದುಷ್ಕೃತ್ಯ ಬಯಲಾಗಿದೆ. ಆಕೆಯ ವಂಚನೆಯ ಜಾಲ ಮತ್ತು ಇಬ್ಬರು ಪುರುಷರೊಂದಿಗಿನ ಸಂಬಂಧವು ಕೊಲೆಗೆ ಕಾರಣವಾಯಿತು. ಬಂಧಿತ ಆರೋಪಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Exit mobile version