ಝಾನ್ಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ, ಎಲ್‌ಐಸಿ ಅಧಿಕಾರಿಯೊಬ್ಬರು ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. 30 ವರ್ಷದ ರವೀಂದ್ರ ಕುಮಾರ್ ಅಹಿರ್ವಾರ್ ಮೃತ ದುರ್ದೈವಿ.
ಬುಧವಾರ ಬೆಳಿಗ್ಗೆ ಕಾರ್ತಿಕ್ ಪೂರ್ಣಿಮೆಯ ಪ್ರಯುಕ್ತ ಕಚೇರಿಗೆ ರಜೆ ಇತ್ತು. ಆದ್ದರಿಂದ ರವೀಂದ್ರ ತಮ್ಮ ಸ್ನೇಹಿತರೊಂದಿಗೆ ಸಿದ್ದೇಶ್ವರ ಪ್ರದೇಶದ ಜಿಐಸಿ ಮೈದಾನಕ್ಕೆ ಕ್ರಿಕೆಟ್ ಆಡಲು ತೆರಳಿದ್ದರು. ಆಟದ ಸಮಯದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದಾಗ ನಿಲ್ಲಿಸಿ ನೀರು ಕುಡಿದರು. ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಅವರು ಅಸ್ವಸ್ಥಗೊಂಡು ವಾಂತಿ ಮಾಡಿದರು ನಂತರ ತಕ್ಷಣ ನೆಲಕ್ಕೆ ಬಿದ್ದದ್ದಾರೆ.
ಆಘಾತಗೊಂಡ ಸ್ನೇಹಿತರು ತಕ್ಷಣ ಆಂಬ್ಯುಲೆನ್ಸ್‌ಗೆ ಕರೆಮಾಡಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ತಪಾಸಣೆ ನಡೆಸಿದಾಗ ರವೀಂದ್ರ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆ ನಡೆದ ಸ್ಥಳವು ಝಾನ್ಸಿಯ ಸಿಪಿ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪ್ರದೇಶದಲ್ಲಿರುವ ಜಿಐಸಿ ಮೈದಾನದಲ್ಲಿ ನಡೆದಿದೆ.
ಘಟನೆ ಕುರಿತು ಮಾಹಿತಿ ಪಡೆದ ಬಳಿಕ ಸ್ಥಳೀಯ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಪತ್ತೆಹಚ್ಚಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕವಾಗಿ ಹೃದಯಾಘಾತ (Heart Attack) ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ರವೀಂದ್ರ ಕುಮಾರ್ ಅಹಿರ್ವಾರ್ ಅವರು ಝಾನ್ಸಿಯ ಸಿಪಿ ಬಜಾರ್‌ನ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಅಭಿವೃದ್ಧಿ ಅಧಿಕಾರಿ ಹುದ್ದೆಗೆ ನೇಮಕಗೊಂಡಿದ್ದರು. ಅವರ ತಂದೆ ಸ್ವಾಮಿ ಪ್ರಸಾದ್ ಅಹಿರ್ವಾರ್ ಕೆಲಸಗಾರರಾಗಿದ್ದು, ಈ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಇದ್ದಾರೆ. ರವೀಂದ್ರ ಎರಡನೇ ಪುತ್ರ.
ಹಿರಿಯ ಸಹೋದರ ವಿಕಾಸ್ ಅಹಮದಾಬಾದ್‌ನ ಮಾರುತಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕಿರಿಯ ಸಹೋದರ ಅರವಿಂದ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದಾರೆ.
ಕುಟುಂಬದವರು ಹೇಳುವಂತೆ, ರವೀಂದ್ರ ಶಾರೀರಿಕವಾಗಿ ತುಂಬಾ ಆರೋಗ್ಯವಾಗಿದ್ದರು. ಮೂರು ತಿಂಗಳ ಹಿಂದೆ ಅವರು ಸಂಪೂರ್ಣ ವೈದ್ಯಕೀಯ ತಪಾಸಣೆಗೊಳಗಾದಾಗ ಯಾವುದೇ ಆರೋಗ್ಯ ಸಮಸ್ಯೆ ಪತ್ತೆಯಾಗಿರಲಿಲ್ಲ. “ಅವರು ಕ್ರೀಡೆಗಳನ್ನು ತುಂಬಾ ಇಷ್ಟಪಡುತ್ತಿದ್ದರು. ಪ್ರತೀ ವಾರದಂತೆಯೇ ಬುಧವಾರವೂ ಮೈದಾನಕ್ಕೆ ತೆರಳಿದ್ದರು. ಆದರೆ ಇಂತಹ ದುರಂತ ಸಂಭವಿಸುತ್ತದೆ ಎಂದು ಯಾರಿಗೂ ಊಹಿಸಲಿಲ್ಲ,” ಎಂದು ಕುಟುಂಬದವರು ಹೇಳಿದ್ದಾರೆ.





