ಬೆಂಗಳೂರು ವಿಮಾನ ನಿಲ್ದಾಣದಿಂದ ಆಗಸ್ಟ್ 15ರಿಂದ ಕೋಝಿಕ್ಕೋಡ್ ಗೆ KSRTC ಫ್ಲೈ ಬಸ್ ಸೇವೆ ಆರಂಭ

ಭಾವುಕರಾದ (11)

ಬೆಂಗಳೂರು: ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆಗೆ ಇದೀಗ ಸ್ಪಂದನೆ ದೊರೆತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಫ್ಲೈ ಬಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ನೂತನ ಬಸ್ ಸೇವೆ ಆರಂಭವಾಗಲಿದ್ದು, ಇದರಿಂದ ದಕ್ಷಿಣ ಕೊಡಗಿನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆ.15ರಿಂದ ಈ ಸೇವೆ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ಹೊಸ ಫ್ಲೈ ಬಸ್ ಸೇವೆಯಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಸೇರಿದಂತೆ ದಕ್ಷಿಣ ಕೊಡಗಿನ ಪ್ರಮುಖ ಪ್ರದೇಶಗಳ ಜನರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ. ಇದುವರೆಗೆ ವಿಮಾನ ನಿಲ್ದಾಣ ತಲುಪಲು ಹಲವು ಹಂತಗಳಲ್ಲಿ ಪ್ರಯಾಣಿಸಬೇಕಾಗಿದ್ದ ಜನರಿಗೆ ಈ ಸೇವೆ ಸಮಯ ಹಾಗೂ ಹಣದ ಉಳಿತಾಯಕ್ಕೂ ಸಹಕಾರಿಯಾಗಲಿದೆ.

ಬೆಂಗಳೂರು-ಕಲ್ಲಿಕೋಟೆ ಬಸ್ ಸಂಚಾರದ ಸಮಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 10.40ಕ್ಕೆ ಬಸ್ ಹೊರಡಲಿದೆ. ಮೈಸೂರು ಹಾಗೂ ಹುಣಸೂರು ಮಾರ್ಗವಾಗಿ ಸಂಚರಿಸುವ ಬಸ್ ಬೆಳಗಿನ ಜಾವ 4.15ಕ್ಕೆ ಗೋಣಿಕೊಪ್ಪಲು ತಲುಪಲಿದೆ. ಬಳಿಕ 4.20ಕ್ಕೆ ಪೊನ್ನಂಪೇಟೆ ಹಾಗೂ 4.50ಕ್ಕೆ ಕುಟ್ಟ ತಲುಪಲಿದೆ.

ಕುಟ್ಟದಿಂದ ಮುಂದುವರಿದು ಕೇರಳದ ಮಾನಂದವಾಡಿ ಹಾಗೂ ಕಲ್ಪೆಟ್ಟ ಮಾರ್ಗವಾಗಿ ಸಂಚರಿಸುವ ಬಸ್ ಬೆಳಗ್ಗೆ 7.15ಕ್ಕೆ ಕಲ್ಲಿಕೋಟೆ ತಲುಪಲಿದೆ. ಈ ಮಾರ್ಗವು ದಕ್ಷಿಣ ಕೊಡಗು ಮತ್ತು ಕೇರಳದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವುದರಿಂದ ಎರಡೂ ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಇದೇ ರೀತಿ ಕಲ್ಲಿಕೋಟೆಯಿಂದ ಬೆಂಗಳೂರಿನತ್ತ ಮರಳುವ ಬಸ್ ರಾತ್ರಿ 7.30ಕ್ಕೆ ಹೊರಡಲಿದೆ. ಕಲ್ಪೆಟ್ಟ ಹಾಗೂ ಮಾನಂದವಾಡಿ ಮಾರ್ಗವಾಗಿ ಸಂಚರಿಸುವ ಬಸ್ ರಾತ್ರಿ 10.15ಕ್ಕೆ ಕುಟ್ಟ ತಲುಪಲಿದೆ. ನಂತರ ರಾತ್ರಿ 10.45ಕ್ಕೆ ಪೊನ್ನಂಪೇಟೆ ಹಾಗೂ 10.50ಕ್ಕೆ ಗೋಣಿಕೊಪ್ಪಲಿನಿಂದ ಹೊರಡಲಿದೆ.

ಮುಂದೆ ಹುಣಸೂರು ಮತ್ತು ಮೈಸೂರು ಮಾರ್ಗವಾಗಿ ಸಂಚರಿಸುವ ಬಸ್ ಬೆಳಗಿನ ಜಾವ 4.15ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ಬಹುದಿನಗಳ ಬೇಡಿಕೆಗೆ ಸ್ಪಂದನೆ

ದಕ್ಷಿಣ ಕೊಡಗಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈ ಕುರಿತು ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು.

ಇದೀಗ KSRTC ಹೊಸ ಫ್ಲೈ ಬಸ್ ಸೇವೆ ಆರಂಭಿಸುತ್ತಿರುವುದರಿಂದ ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ವಿಶೇಷವಾಗಿ ವಿಮಾನ ಪ್ರಯಾಣ ಮಾಡುವ ಗೋಣಿಕೊಪ್ಪಲು, ಪೊನ್ನಂಪೇಟೆ ಹಾಗೂ ಕುಟ್ಟ ಭಾಗದ ಪ್ರಯಾಣಿಕರಿಗೆ ಈ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ವಿಮಾನ ಪ್ರಯಾಣಿಕರಷ್ಟೇ ಅಲ್ಲದೆ, ಬೆಂಗಳೂರಿಗೆ ತೆರಳುವ ಹಾಗೂ ಕೇರಳದ ಕಲ್ಲಿಕೋಟೆ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೂ ಈ ಬಸ್ ಸೇವೆ ನೆರವಾಗುವ ನಿರೀಕ್ಷೆಯಿದೆ. ಆ.15ರಿಂದ ಆರಂಭವಾಗಲಿರುವ ನೂತನ ಫ್ಲೈ ಬಸ್ ಸೇವೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ.

Exit mobile version