ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಸಾ*ವು!

ಸರ್ಟಿಫಿಕೇಟ್ (3)

ಲಕ್ನೋ: ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಕರ್ನಾಟಕದ ಪೈಲಟ್ ಸೇರಿದಂತೆ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂದು ಗುರುವಾರ ನಡೆದಿದೆ.

ಕಾನ್ಪುರದ ಗಾರ್ಗ್ ಏವಿಯೇಷನ್ ತರಬೇತಿ ಕೇಂದ್ರದಿಂದ ಬೆಳಗ್ಗೆ 11:30ರ ಸುಮಾರಿಗೆ ಟ್ವಿನ್ ಎಂಜಿನ್ ಹೊಂದಿರುವ ನಾಲ್ಕು ಆಸನಗಳ ತರಬೇತಿ ವಿಮಾನ ಟೇಕ್‌ಆಫ್ ಆಗಿತ್ತು. ತರಬೇತಿ ಹಾರಾಟ ಮುಗಿಸಿ ಕೇಂದ್ರಕ್ಕೆ ವಾಪಸ್‌ ಆಗುತ್ತಿದ್ದ ವೇಳೆ ಸುಮಾರು 11:50ಕ್ಕೆ ಗಂಗಾ ನದಿ ತೀರದ ಸಮೀಪದ ಹೊಲದಲ್ಲಿ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ ಹಾಗೂ ತರಬೇತಿ ನೀಡುತ್ತಿದ್ದ ಇನ್‌ಸ್ಟ್ರಕ್ಟರ್ ಸೇರಿದಂತೆ ಇಬ್ಬರು ಮಾತ್ರ ಇದ್ದರು. ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತರನ್ನು ಗುಜರಾತ್‌ನ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ವಿಮಾನದ ಇನ್‌ಸ್ಟ್ರಕ್ಟರ್‌ಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿತ್ತು. ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು, ತುರ್ತು ಸೇವಾ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಪತನದ ತೀವ್ರತೆಗೆ ವಿಮಾನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರ ಲೋಹದ ಭಾಗಗಳು ಹಾಗೂ ರೆಕ್ಕೆಗಳು ಮುರಿದು ಹೊಲದಲ್ಲಿ ಚದುರಿದ ಸ್ಥಿತಿಯಲ್ಲಿ ಕಂಡುಬಂದಿವೆ. ವಿಮಾನವನ್ನು 2023ರಲ್ಲಿ ತರಬೇತಿ ಕೇಂದ್ರಕ್ಕೆ ತರಲಾಗಿತ್ತು ಎಂದು ತಿಳಿದುಬಂದಿದೆ.

ಡಿಜಿಸಿಎ ಹೇಳಿಕೆ

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪ್ರಕಾರ, ಕಾನ್ಪುರ ಸಿವಿಲ್ ಏರ್‌ಪೋರ್ಟ್‌ನ ಸ್ಥಳೀಯ ಹಾರಾಟ ಪ್ರದೇಶದಲ್ಲಿ ವಿಮಾನ ತರಬೇತಿ ಹಾರಾಟ ನಡೆಸುತ್ತಿತ್ತು. ವಿಮಾನದಲ್ಲಿ ತರಬೇತಿ ಪೈಲಟ್ ಮತ್ತು ಇನ್‌ಸ್ಟ್ರಕ್ಟರ್ ಇದ್ದರು. ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಡಿಜಿಸಿಎ ತಿಳಿಸಿದೆ.

ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಮಂಡಳಿಗೆ ಮಾಹಿತಿ ನೀಡಲಾಗಿದ್ದು, ತನಿಖಾ ತಂಡ ಪರಿಶೀಲನೆ ನಡೆಸಲಿದೆ. ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಂತಿಮ ಕಾರಣ ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಬ್ಬರು ಪೈಲಟ್‌ಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಈ ಆಘಾತವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಕರ್ನಾಟಕದ ಅಭಿಷೇಕ್ ಪೂಜಾರಿ ಅವರ ಸಾವಿನ ಸುದ್ದಿ ಕುಟುಂಬಸ್ಥರು, ಸ್ನೇಹಿತರು ಹಾಗೂ ರಾಜ್ಯದ ವಿಮಾನಯಾನ ಕ್ಷೇತ್ರದವರಲ್ಲಿ ಆಘಾತ ಮೂಡಿಸಿದೆ.

Exit mobile version