ಇಸ್ರೋದ ಮತ್ತೊಂದು ಐತಿಹಾಸಿಕ ಹೆಜ್ಜೆ: ಮಂಗಳಯಾನ-2 ಮಿಷನ್‌ಗೆ ಭಾರತ ಸಜ್ಜು

Untitled design 2025 11 06t143659.964

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಐತಿಹಾಸಿಕ ಮಂಗಳಯಾನ-1ರ ಯಶಸ್ಸಿನ 12 ವರ್ಷಗಳ ನಂತರ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಿದ್ಧವಾಗಿದೆ. ಇದೀಗ ಮಂಗಳಯಾನ-2 ಮಿಷನ್ 2030ರ ವೇಳೆಗೆ ಉಡಾವಣೆಯಾಗಲಿದೆ ಎಂದು ಇಸ್ರೋ ಘೋಷಿಸಿದೆ.

ಚಂದ್ರಯಾನ-3ರ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್, ಆದಿತ್ಯ-L1ರ ಸೌರ ಅಧ್ಯಯನ ಮತ್ತು ನಿಸಾರ್ ನಂತಹ ಇತರ ಅಂತರಾಷ್ಟ್ರೀಯ ಯಶಸ್ವಿ ಕಾರ್ಯಕ್ರಮಗಳ ನಂತರ, ಇಸ್ರೋ ಈಗ ಮಂಗಳ ಗ್ರಹದತ್ತ ಗಮನ ಹರಿಸಿದೆ. ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಈ ಮಿಷನ್ ಮಂಗಳದ ಮೇಲ್ಮೈಯಲ್ಲಿ ಭಾರತದ ಮೊದಲ ಮೃದು ಲ್ಯಾಂಡಿಂಗ್ ಪ್ರಯತ್ನವಾಗಿರುತ್ತದೆ ಎಂದು ದೃಢಪಡಿಸಿದ್ದಾರೆ.

2013ರ ನವೆಂಬರ್ 5ರಂದು ಉಡಾವಣೆಯಾದ ಮಂಗಳಯಾನ-1 (ಮಾರ್ಸ್ ಆರ್ಬಿಟರ್ ಮಿಷನ್) ಜಾಗತಿಕವಾಗಿ ಸದ್ದು ಮಾಡಿತ್ತು. ಕೇವಲ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಈ ಯಾನ ಮಂಗಳ ಗ್ರಹದ ಕಕ್ಷೆಯನ್ನು ತಲುಪಿ, ಏಷ್ಯಾದ ಮೊದಲ ರಾಷ್ಟ್ರವೆಂದು ಭಾರತಕ್ಕೆ ಹೆಗ್ಗಳಿಕೆ ತಂದಿತ್ತು. ಅಲ್ಲದೆ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ವಿಶ್ವದ ಮೊದಲ ದೇಶ ಎಂಬ ದಾಖಲೆ ಬರೆಯಿತು.

ಯೋಜಿತ ಆರು ತಿಂಗಳ ಜೀವಿತಾವಧಿಯನ್ನು ಮೀರಿ, ಏಳು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಈ ಮಿಷನ್ ಮಂಗಳದ ವಾತಾವರಣ, ಖನಿಜಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿತ್ತು. ಹೈ-ರೆಸಲ್ಯೂಶನ್ ಕ್ಯಾಮೆರಾದ ಮೂಲಕ ತೆಗೆದ ಚಿತ್ರಗಳು ಮಂಗಳದ ರಹಸ್ಯಗಳನ್ನು ಬಿಚ್ಚಿಟ್ಟವು. ಆದರೆ 2022ರಲ್ಲಿ ಇಂಧನ ಕೊರತೆಯಿಂದ ಸಂವಹನ ಕಡಿತಗೊಂಡಿತು.

ಈಗ ಮಂಗಳಯಾನ-2 ಹೊಸ ಆಯಾಮಕ್ಕೆ ಕಾಲಿಡಲಿದೆ. ಇದು ಕೇವಲ ಆರ್ಬಿಟರ್ ಮಿಷನ್ ಮಾತ್ರವಲ್ಲ, ಮಂಗಳದ ಮೇಲೆ ಮೃದು ಲ್ಯಾಂಡಿಂಗ್ ಸಾಧಿಸುವ ಭಾರತದ ಮೊದಲ ಪ್ರಯತ್ನವಾಗಲಿದೆ. ಆರ್ಬಿಟರ್ ಮಂಗಳದ ವಾತಾವರಣ, ಧೂಳಿನ ಚಂಡಮಾರುತಗಳು, ಮೇಲ್ಮೈಯ ರಚನೆ ಮತ್ತು ನೀರಿನ ಆವಿಯ ಅಧ್ಯಯನ ನಡೆಸಲಿದೆ.

ಲ್ಯಾಂಡರ್ ಮಂಗಳದ ಕೆಂಪು ಮಣ್ಣಿನಲ್ಲಿ ಸುರಕ್ಷಿತವಾಗಿ ಇಳಿಯಲಿದ್ದು, ಇದು ಚಂದ್ರಯಾನ-3ರ ತಂತ್ರಜ್ಞಾನದ ಮೇಲೆ ಆಧಾರಿತವಾಗಿರುತ್ತದೆ. ಜೊತೆಗೆ ರೋವರ್ ಕಳುಹಿಸುವ ಸಾಧ್ಯತೆಯನ್ನು ಇಸ್ರೋ ಪರಿಶೀಲಿಸುತ್ತಿದೆ. ರೋವರ್ ಮಂಗಳದ ಮೇಲ್ಮೈಯಲ್ಲಿ ಸಂಚರಿಸಿ, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಜೀವದ ಸಂಕೇತಗಳನ್ನು ಹುಡುಕಬಹುದು.

ಈ ಮಿಷನ್ ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಹೊಸ ಅಧ್ಯಾಯ ಬರೆಯಲಿದೆ. ಮಂಗಳಯಾನ-1ರಂತೆಯೇ ಕಡಿಮೆ ಬಜೆಟ್‌ನಲ್ಲಿ ದೊಡ್ಡ ಯಶಸ್ಸು ಸಾಧಿಸುವ ನಿರೀಕ್ಷೆಯಿದೆ.

Exit mobile version