ಮುಂಬೈ ಬಳಿಯ ಪನ್ವೇಲ್‌ನ ನಿರ್ಜನ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ದೀಪಾ,ದೂಪ ಮತ್ತು ಕಡಿಗಳನ್ನ ಬೆಳಗಿಸಿ, ಮಾಟಮಂತ್ರ ಮಾಡಿದ್ದಾನೆ. ಕತ್ತಲೆಯಲ್ಲಿ ತಾನು ಕೊಲೆ ಮಾಡಿದ ಮಹಿಳೆಯ ಆತ್ಮದೊಂದಿಗೆ ಮಾತನಾಡಿ, ಕ್ಷಮೆಯಾಚಿಸಲು ಯತ್ನಿಸಿದ್ದಾನೆ. ಇದು ಯಾವುದೋ ಹಾರರ್ ಸಿನಿಮಾದ ಕಥೆಯಲ್ಲ, ಇಂದೋರ್‌ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಭೀಕರ ಕೊಲೆ ಪ್ರಕರಣದ ಆರೋಪಿ ಪಿಯೂಷ್ ಧಮ್ನೋಟಿಯಾ ಎಂಬಾತನ ವಿಕೃತ ನಡವಳಿಕೆ.
ಘಟನೆಯ ವಿವರ
ಫೆಬ್ರವರಿ 10 ರಂದು ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಆರೋಪಿ ಪಿಯೂಷ್ ಮತ್ತು ಮೃತ ವಿದ್ಯಾರ್ಥಿನಿ ಸಹಪಾಠಿಗಳಾಗಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರಿಬ್ಬರೂ ಮಧ್ಯಾಹ್ನ ಕೊಠಡಿಯೊಳಗೆ ಹೋಗಿದ್ದರು. ಸುಮಾರು ಎರಡೂವರೆ ಗಂಟೆಗಳ ನಂತರ ಪಿಯೂಷ್ ಒಬ್ಬನೇ ಕೈಯಲ್ಲಿ ಬ್ಯಾಗ್ ಹಿಡಿದು ಹೊರಬಂದಿದ್ದ. ಆ ಸಮಯದಲ್ಲಿ ಆತ ತನ್ನ ಗೆಳತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಹೊರಬಂದಿರುವ ವಿವರಗಳು ಬೆಚ್ಚಿಬೀಳಿಸುವಂತಿವೆ. ಪಿಯೂಷ್ ಆಕೆಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ನಿರಾಕರಿಸಿದಾಗ ಹಲ್ಲೆ ನಡೆಸಿ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿದ್ದ. ಉಡುಗೊರೆ ನೀಡುತ್ತೇನೆ ಎಂದು ನಂಬಿಸಿ ಕಣ್ಣಿಗೆ ಬಟ್ಟೆ ಕಟ್ಟಿದ್ದ. ಆಕೆ ಕಿರುಚಿದಾಗ ಬಾಯಿಗೆ ಬಟ್ಟೆ ತುರುಕಿ, ಎದೆಯ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದಿದ್ದ. ಆಕೆ ಸತ್ತಿದ್ದಾಳೆಂದು ಖಚಿತಪಡಿಸಿಕೊಳ್ಳಲು ಎದೆಗೆ ಚಾಕುವಿನಿಂದ ಇರಿದಿದ್ದ. ಆ ಕ್ರೌರ್ಯ ಅಷ್ಟಕ್ಕೆ ನಿಲ್ಲಲಿಲ್ಲ, ಕೊಲೆಯ ನಂತರ ಮದ್ಯದ ಅಂಗಡಿಗೆ ಹೋಗಿ ಬಿಯರ್ ತಂದು ಶವದ ಪಕ್ಕದಲ್ಲೇ ಕುಳಿತು ಕುಡಿದಿದ್ದ. ನಂತರ ಆಕೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ.
ಸಾಕ್ಷ್ಯ ನಾಶ
ಕೊಲೆಯ ನಂತರ ಪಿಯೂಷ್ ಆಕೆಯ ಫೋನ್‌ನಿಂದ ʼಅಪ್ಪಾ ಅವಳು ಮನೆಗೆ ಹಿಂತಿರುಗುವುದಿಲ್ಲ ಎಂದು ಹೇಳಿʼ ಎಂಬ ಸಂದೇಶ ಕಳುಹಿಸಿದ್ದ. ಅಷ್ಟೇ ಅಲ್ಲದೆ, ಅವರಿಬ್ಬರ 11 ಆಕ್ಷೇಪಾರ್ಹ ವೀಡಿಯೊಗಳನ್ನು ಕಾಲೇಜು ವಾಟ್ಸಾಪ್ ಗ್ರೂಪ್‌ಗೆ ಹಂಚಿದ್ದ ಮತ್ತು ಆಕೆಯ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿ ಸಂಬಂಧಿಕರಿಗೆ ಅವಮಾನ ಮಾಡಿದ್ದ. ನಂತರ ಮುಂಬೈಗೆ ಪರಾರಿಯಾಗಿ ಆಕೆಯ ಫೋನ್ ಅನ್ನು ಬಿಸಾಡಿದ್ದ.
ಪನ್ವೇಲ್‌ನಲ್ಲಿ ಮಾಟಮಂತ್ರದ ಪ್ರಯೋಗ
ಮುಂಬೈ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಿದಾಗ ಆಘಾತಕಾರಿ ವಿಷಯವೊಂದು ಬಯಲಾಯಿತು. ಪನ್ವೇಲ್‌ನಲ್ಲಿ ಪಿಯೂಷ್ ಮಾಟಮಂತ್ರ ಮಾಡಲು ಪ್ರಯತ್ನಿಸಿದ್ದ. ಕೊಲೆಯ ನಂತರ ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸುತ್ತಿದ್ದ ಆತ, ಯೂಟ್ಯೂಬ್ ನೋಡಿ ಆಕೆಯ ಆತ್ಮದೊಂದಿಗೆ ಮಾತನಾಡಲು ಧೂಪದ್ರವ್ಯ ಬೆಳಗಿ ಮಾಟಮಂತ್ರ ಮಾಡಿದ್ದ ಎಂಬ ಭಾಯಾನಕ ಮಾಹಿತಿ ತಿಳಿದುಬಂದಿದೆ.
ತನ್ನ ಗೆಳತಿ ಡೇಟಿಂಗ್ ಆ್ಯಪ್ ಮೂಲಕ ಬೇರೆಯವರೊಂದಿಗೆ ಮಾತನಾಡುತ್ತಿದ್ದಳು ಎಂಬ ಅಸೂಯೆ ಮತ್ತು ಮದುವೆಯ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಈ ಕೊಲೆಗೆ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ಪ್ರಸ್ತುತ ಪಿಯೂಷ್ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಧಿವಿಜ್ಞಾನ ತಂಡವು ಅಪಾರ್ಟ್‌ಮೆಂಟ್‌ನಿಂದ ವಶಪಡಿಸಿಕೊಂಡ ಹಗ್ಗಗಳು, ಮುರಿದ ಚಾಕು ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದೆ.
