ನವದೆಹಲಿ ಸೆ.23: ಲಂಡನ್‌ನಿಂದ ನವದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಲಂಡನ್‌ಗೆ ವಾಪಸ್ ಆಗಿರುವ ಘಟನೆ ನಡೆದಿದೆ. ವಿಮಾನದಲ್ಲಿ ದೋಷ ಕಾಣಿಸಿಕೊಂಡ ಬಳಿಕ ಪೈಲಟ್‌ಗಳು ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹಿಂದಿರುಗಿಸಿದ್ದಾರೆ.
ಸೆಪ್ಟೆಂಬರ್ 22ರಂದು ಲಂಡನ್ ಹೀಥ್ರೂ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ 6E04ರಲ್ಲಿ ಈ ಘಟನೆ ನಡೆದಿದೆ. ಬೋಯಿಂಗ್ 787-9 ವಿಮಾನವು ಭಾರತೀಯ ಕಾಲಮಾನ ಮಧ್ಯರಾತ್ರಿ 12:40 ರ ಸುಮಾರಿಗೆ ಟೇಕ್‌ಆಫ್ ಆಗಿತ್ತು ಎನ್ನಲಾಗಿದೆ.
ಟೇಕ್‌ಆಫ್ ಆದ ಬಳಿಕ ಸುಮಾರು ಒಂದು ಗಂಟೆ ವಿಮಾನ ಹಾರಾಟ ನಡೆಸಿತ್ತು. ಈ ಸಂದರ್ಭದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಮುನ್ನೆಚ್ಚರಿಕೆ ವಹಿಸಿದ ವಿಮಾನ ಸಿಬ್ಬಂದಿ ವಿಮಾನವನ್ನು ಮತ್ತೆ ಲಂಡನ್‌ನತ್ತ ತಿರುಗಿಸಿದ್ದಾರೆ. ಬಳಿಕ ಸುಮಾರು ಬೆಳಗಿನ 2 ಗಂಟೆ ವೇಳೆಗೆ ವಿಮಾನ ಸುರಕ್ಷಿತವಾಗಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಇಂಡಿಗೋ ವಕ್ತಾರರು ಮಾಹಿತಿ ನೀಡಿದ್ದು, ಲಂಡನ್‌ನಿಂದ ನವದೆಹಲಿಗೆ ತೆರಳುತ್ತಿದ್ದ 6E04 ವಿಮಾನದಲ್ಲಿ ಟೇಕ್‌ಆಫ್ ಆದ ಕೆಲವೇ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ವಿಮಾನವನ್ನು ಇದೀಗ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ಬಳಿಕ ಹಾಗೂ ಸಂಬಂಧಪಟ್ಟ ಎಲ್ಲಾ ಅನುಮತಿಗಳನ್ನು ಪಡೆದ ನಂತರ ವಿಮಾನದ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ಇಂಡಿಗೋ ತಿಳಿಸಿದೆ.
ಘಟನೆಯಿಂದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದ್ದು, ಅದಕ್ಕಾಗಿ ಇಂಡಿಗೋ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನವು ಹೀಥ್ರೂಗೆ ಸುರಕ್ಷಿತವಾಗಿ ಮರಳಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ತಾಂತ್ರಿಕ ದೋಷದ ನಿಖರ ಕಾರಣ ಹಾಗೂ ವಿಮಾನ ಪುನಃ ಯಾವಾಗ ದೆಹಲಿಗೆ ಹೊರಡಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ವಿಮಾನದ ತಪಾಸಣೆ ಪೂರ್ಣಗೊಂಡ ಬಳಿಕ ತಿಳಿಯಬೇಕಿದೆ.
