ನವದೆಹಲಿ: ಕಳೆದ ಕೆಲವು ದಿನಗಳಿಂದ ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯಲ್ಲಿ ಉಂಟಾಗಿದ್ದ ವ್ಯಾಪಕ ವಿಮಾನ ರದ್ದತಿ ಮತ್ತು ವಿಳಂಬ ಬಿಕ್ಕಟ್ಟು ಹಂತ ಹಂತವಾಗಿ ಸಡಿಲಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಈ ಅಡಚಣೆಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ಇದುವರೆಗೆ ₹ 610 ಕೋಟಿಗಳ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (MoCA) ಭಾನುವಾರ ತಿಳಿಸಿದೆ.
ಕಳೆದ ಕೆಲವು ದಿನಗಳಲ್ಲಿ ನೂರಾರು ವಿಮಾನಗಳನ್ನು ರದ್ದುಗೊಳಿಸಿದ್ದ ಇಂಡಿಗೋ, ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿತ್ತು. ಆದರೆ, ಸಚಿವಾಲಯದ ತ್ವರಿತ ಕ್ರಮಗಳ ಫಲವಾಗಿ ಪರಿಸ್ಥಿತಿ ಸ್ಥಿರಗೊಳ್ಳುತ್ತಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಸಾಮಾನ್ಯವಾಗಿ ಪ್ರತಿದಿನ ಸುಮಾರು 2,300 ವಿಮಾನಗಳನ್ನು ನಿರ್ವಹಿಸುತ್ತದೆ. ಈ ಬಿಕ್ಕಟ್ಟಿನ ಮಧ್ಯೆಯೂ ಶನಿವಾರ ಸುಮಾರು 1,500 ವಿಮಾನಗಳನ್ನು ನಿರ್ವಹಿಸಿದ್ದು, ಭಾನುವಾರದ ಸಂಜೆಯ ವೇಳೆಗೆ ಈ ಸಂಖ್ಯೆ 1,650 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ಅಡಚಣೆಯನ್ನು ಪರಿಹರಿಸಲು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ. ಇತರ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳು ಸರಾಗವಾಗಿ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶಾದ್ಯಂತ ವಿಮಾನ ಪ್ರಯಾಣ ಕಾರ್ಯಾಚರಣೆಗಳು ತ್ವರಿತ ಗತಿಯಲ್ಲಿ ಸ್ಥಿರವಾಗುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂಡಿಗೋದ ಕಾರ್ಯಕ್ಷಮತೆ ಇಂದು ಸುಧಾರಣೆಯನ್ನುಕಂಡಿದ್ದು, ವಿಮಾನ ವೇಳಾಪಟ್ಟಿಗಳು ಸಾಮಾನ್ಯ ಮಟ್ಟಕ್ಕೆ ಮರಳುತ್ತಿವೆ.
ಇಂಡಿಗೋ ಸಿಇಒ ಪೀಟರ್ ಎಲ್ಮರ್ಸ್ ಅವರು ಭಾನುವಾರದಂದು ಆಂತರಿಕ ವೀಡಿಯೊ ಸಂದೇಶದಲ್ಲಿ, ವಿಮಾನಯಾನ ಸಂಸ್ಥೆಯು ಸುಮಾರು 1,650 ವಿಮಾನಗಳನ್ನು ನಿರ್ವಹಿಸಲಿದ್ದು, ಹಂತ ಹಂತವಾಗಿ ನಾವು ಮತ್ತೆ ಸೇವೆಗೆ ಮರಳುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ವಿಮಾನಯಾನ ಸಂಸ್ಥೆಯ ಆನ್ ಟೈಮ್ ಪರ್ಫಾರ್ಮೆನ್ಸ್ (OTP) ಭಾನುವಾರ ಶೇ. 75 ರಷ್ಟು ಇರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಮಾನ ರದ್ದತಿಯ ಕಾರಣದಿಂದಾಗಿ ಬೇಡಿಕೆಯಲ್ಲಿ ಬದಲಾವಣೆಯಾಗಿ ವಿಮಾನ ದರಗಳು ತಾತ್ಕಾಲಿಕವಾಗಿ ಏರಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಸಚಿವಾಲಯ ಮಧ್ಯಪ್ರವೇಶಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ವಿಮಾನ ದರಗಳ ಮೇಲೆ ನಿಗದಿತ ಮಿತಿ ಘೋಷಿಸಿತು. ಈ ಕ್ರಮವು ಪ್ರಯಾಣಿಕರಿಗೆ ನ್ಯಾಯಯುತ ಮತ್ತು ಕೈಗೆಟುಕುವ ದರಗಳನ್ನು ಖಚಿತಪಡಿಸಿದೆ. ಪರಿಷ್ಕೃತ ದರ ರಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ರದ್ದಾದ ಅಥವಾ ವಿಳಂಬವಾದ ವಿಮಾನಗಳ ಎಲ್ಲಾ ಮರುಪಾವತಿಗಳನ್ನು ಭಾನುವಾರ ರಾತ್ರಿ 8:00 ಗಂಟೆಯೊಳಗೆ ಪೂರ್ಣಗೊಳಿಸುವಂತೆ ಸಚಿವಾಲಯವು ಇಂಡಿಗೋಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿತ್ತು. ಇಂಡಿಗೋ ಇಲ್ಲಿಯವರೆಗೆ ಒಟ್ಟು ₹ 610 ಕೋಟಿ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಿದೆ.
ರದ್ದತಿಯಿಂದ ಪ್ರಭಾವಿತವಾದ ಪ್ರಯಾಣವನ್ನು ಮರು ವೇಳಾಪಟ್ಟಿ (Re-scheduling) ಮಾಡಲು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸಲಾಗಿದೆ.
ಸಚಿವಾಲಯದ ಸೂಚನೆಯ ಮೇರೆಗೆ, 48 ಗಂಟೆಗಳ ಒಳಗೆ ಅಡೆತಡೆಗಳಿಂದಾಗಿ ಪ್ರಯಾಣಿಕರಿಂದ ಬೇರ್ಪಟ್ಟ ಎಲ್ಲಾ ಸಾಮಾನುಗಳನ್ನು (Baggage) ಪತ್ತೆಹಚ್ಚಿ ತಲುಪಿಸಲು ಇಂಡಿಗೋ ಕ್ರಮ ಕೈಗೊಂಡಿದೆ. ಈ ಪ್ರಯತ್ನದೊಂದಿಗೆ, ಇಂಡಿಗೋ ಶನಿವಾರದ ವೇಳೆಗೆ ಭಾರತದಾದ್ಯಂತ ಪ್ರಯಾಣಿಕರಿಗೆ ಸುಮಾರು 3,000 ಬ್ಯಾಗೇಜ್‌ಗಳನ್ನು ಯಶಸ್ವಿಯಾಗಿ ವಿತರಿಸಿದೆ.
ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಗೋವಾದ ವಿಮಾನ ನಿಲ್ದಾಣ ನಿರ್ದೇಶಕರು ಇಂದು ಟರ್ಮಿನಲ್‌ಗಳಲ್ಲಿ ಸಾಮಾನ್ಯ ಪರಿಸ್ಥಿತಿಯನ್ನು ದೃಢಪಡಿಸಿದ್ದಾರೆ. ಚೆಕ್-ಇನ್, ಭದ್ರತೆ ಅಥವಾ ಬೋರ್ಡಿಂಗ್ ಪಾಯಿಂಟ್‌ಗಳಲ್ಲಿ ಜನಸಂದಣಿಯಿಲ್ಲದೆ ಪ್ರಯಾಣಿಕರ ಚಲನೆ ಸುಗಮವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ 24×7 ನಿಯಂತ್ರಣ ಕೊಠಡಿಯು ಸಮಗ್ರ ಸಮನ್ವಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.





