ಟಿಕೆಟ್ ಇಲ್ಲದೆ ರೈಲು ಹತ್ತಿದ್ರೆ ₹500 ದಂಡ ಫಿಕ್ಸ್!

Untitled design (65)

ದೆಹಲಿ, (ಜೂನ್ 20): ಟಿಕೆಟ್ ಪಡೆಯದೇ ಕೆಲ ಜನರು ರೈಲಿನಲ್ಲಿ ಪ್ರಯಾಣಿಸುವುದು ದಿನೇ ದಿನೇ ಹೆಚ್ಚಾಗುತ್ತಿದೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರಿಗೆ ರೈಲ್ವೆ ಇಲಾಖೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು, ಸುರಕ್ಷತೆ ಹೆಚ್ಚಿಸುವುದು ಹಾಗೂ ಅನಧಿಕೃತ ಪ್ರಯಾಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜುಲೈ 1ರಿಂದ ದಂಡದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

 ಜುಲೈ 1ರಿಂದ ರೈಲ್ವೆ ಹೊಸ ದಂಡ ನಿಯಮ ಜಾರಿ

ಟಿಕೆಟ್ ಇಲ್ಲದೆ ಪ್ರಯಾಣಕ್ಕೆ ₹500 ದಂಡ

ಮಹಿಳಾ ಕೋಚ್ ಪ್ರವೇಶಿಸಿದರೆ ₹2,500 ವರೆಗೆ ದಂಡ

ನಿಷೇಧಿತ ವಸ್ತು ಸಾಗಣೆಗೆ ₹10,000 ವರೆಗೆ ದಂಡ

ಗಲಾಟೆ ಮತ್ತು ಕಿರುಕುಳಕ್ಕೆ ದಂಡದ ಜೊತೆಗೆ ಜೈಲು ಶಿಕ್ಷೆಯ ಸಾಧ್ಯತೆ

ಹೊಸ ನಿಯಮದ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣ ಮಾಡುವ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್ ದರದ ಜೊತೆಗೆ ₹500 ದಂಡ ಪಾವತಿಸಬೇಕಾಗುತ್ತದೆ. ಇದುವರೆಗೆ ಟಿಕೆಟ್ ರಹಿತ ಪ್ರಯಾಣಕ್ಕೆ ಟಿಕೆಟ್ ದರದ ಜೊತೆಗೆ ₹250 ದಂಡ ವಿಧಿಸಲಾಗುತ್ತಿತ್ತು. ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಣೆ ಮಾಡಲು ಹೊರಟಿದೆ.

ರೈಲು ಪ್ರಯಾಣದ ವೇಳೆ ನಿಯಮ ಉಲ್ಲಂಘನೆ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ವಿಶೇಷವಾಗಿ ಮಹಿಳಾ ಕೋಚ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ ₹2,500 ವರೆಗೆ ದಂಡ ವಿಧಿಸುವ ನಿಯಮ ಜಾರಿಗೆ ಬರಲಿದೆ.

ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವುದು ಅಥವಾ ಭಿಕ್ಷೆ ಬೇಡುವುದಕ್ಕೂ ಇಲಾಖೆಯು ದಂಡ ವಿಧಿಸಲಾಗುತ್ತದೆ. ಇಂತಹ ಉಲ್ಲಂಘನೆಗಳಿಗೆ ₹2,000 ರೂ. ವರೆಗೆ ದಂಡ ಪಾವತಿಸಬೇಕಾಗುತ್ತದೆ. ನಿಷೇಧಿತ ವಸ್ತುಗಳನ್ನು ಸಾಗಿಸುವವರಿಗೆ ಗರಿಷ್ಠ ₹10,000 ರೂ ವರೆಗೆ ದಂಡ ವಿಧಿಸುವ ಅವಕಾಶ ಕೂಡಾ ಇದೆ.

ರೈಲು ಅಥವಾ ರೈಲ್ವೆ ನಿಲ್ದಾಣದ ನಿರ್ಬಂಧಿತ ಪ್ರದೇಶಗಳಿಗೆ ಅನಧಿಕೃತವಾಗಿ ಪ್ರವೇಶಿಸುವವರಿಗೆ ₹500 ದಂಡ ವಿಧಿಸಲಾಗುತ್ತದೆ. ಪ್ರಯಾಣದ ವೇಳೆ ಮದ್ಯಪಾನ ಮಾಡಿ ಗಲಾಟೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ 24 ಗಂಟೆಗಳವರೆಗೆ ಜೈಲು ಶಿಕ್ಷೆ, ₹1,000 ದಂಡ ಅಥವಾ ಸಮುದಾಯ ಸೇವೆಯ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಇದಲ್ಲದೆ, ರೈಲಿನಲ್ಲಿ ಅಶ್ಲೀಲ ವರ್ತನೆ ತೋರಿಸುವುದು, ಸಹ ಪ್ರಯಾಣಿಕರಿಗೆ ತೊಂದರೆ ನೀಡುವುದು ಅಥವಾ ಕಿರುಕುಳ ನೀಡುವುದು ಕಂಡುಬಂದರೆ ₹1,000 ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಸಹ ಇದೆ.

ಹೊಸ ನಿಯಮಗಳ ಮೂಲಕ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಶಿಸ್ತು ಕಾಪಾಡುವ ಗುರಿ ಹೊಂದಿದೆ. ದಂಡ ಪಾವತಿಸಲು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Exit mobile version