ನವದೆಹಲಿ: ದಿನೇ ದಿನೇ ಹೆಚ್ಚುತ್ತಿರುವ ರೈಲು ಟಿಕೆಟ್ ವಂಚನೆ ಪ್ರಕರಣಗಳನ್ನು (Cheating Cases) ತಡೆಗಟ್ಟುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆ (Indian Railways) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮುಂದೆ ಕೆಲ ವರ್ಗದ ಪ್ರಯಾಣಿಕರು ಮೊಬೈಲ್ ಫೋನ್‌ನಲ್ಲಿ ಟಿಕೆಟ್ ತೋರಿಸುವುದಕ್ಕೆ ಅವಕಾಶವಿಲ್ಲ. ಕಾಯ್ದಿರಿಸದ (Unreserved) ಟಿಕೆಟ್‌ಗಳ ಮುದ್ರಿತ ಪ್ರತಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಭಾರತೀಯ ರೈಲ್ವೆಯಲ್ಲಿ ಟಿಕೆಟ್‌ಗಳು ಮೂರು ಮುಖ್ಯ ವಿಧಗಳಿವೆ. ಕಾಯ್ದಿರಿಸಿದ (ರಿಸರ್ವ್ಡ್) ಇ-ಟಿಕೆಟ್‌ಗಳು, ಮೊಬೈಲ್ ಟಿಕೆಟ್‌ಗಳು (ಎಂ-ಟಿಕೆಟ್) ಮತ್ತು ಕಾಯ್ದಿರಿಸದ (ಅನ್‌ರಿಸರ್ವ್ಡ್) ಟಿಕೆಟ್‌ಗಳು. ಕಾಯ್ದಿರಿಸಿದ ಟಿಕೆಟ್‌ಗಳಿಗೆ ಮೊಬೈಲ್‌ನಲ್ಲಿ ತೋರಿಸುವುದು ಸಂಪೂರ್ಣ ಒಪ್ಪಿಗೆಯಿದೆ. ಪ್ರಯಾಣಿಕರು ಐಆರ್‌ಸಿಟಿಸಿ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಬುಕ್ ಮಾಡಿದ ಇ-ಟಿಕೆಟ್ ಅನ್ನು ಮೊಬೈಲ್‌ನಲ್ಲಿ ತೋರಿಸಿ, ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬಹುದು.
ಆದರೆ ಕಾಯ್ದಿರಿಸದ ಟಿಕೆಟ್‌ಗಳನ್ನು ಯುಟಿಎಸ್ (Unreserved Ticketing System) ಆ್ಯಪ್, ಎಟಿವಿಎಂ ಯಂತ್ರಗಳು ಅಥವಾ ರೈಲು ನಿಲ್ದಾಣದ ಕೌಂಟರ್‌ಗಳ ಮೂಲಕ ಬುಕ್ ಮಾಡಬಹುದು. ಇಲ್ಲಿ ಮುಖ್ಯ ನಿಯಮ ಇದ್ದು, ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಬುಕ್ ಮಾಡಿ, ಮುದ್ರಿತ (ಪೇಪರ್) ಟಿಕೆಟ್ ತೆಗೆದುಕೊಂಡಿದ್ದರೆ, ಅದೇ ಪ್ರತಿಯನ್ನು ಪ್ರಯಾಣದಲ್ಲಿ ಕೊಂಡೊಯ್ಯಬೇಕು. ಆದರೆ ಡಿಜಿಟಲ್ ಆಗಿ ಬುಕ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳದಿದ್ದರೆ, ಬುಕ್ ಮಾಡಿದ ಅದೇ ಮೊಬೈಲ್‌ನಲ್ಲಿ ಟಿಕೆಟ್ ತೋರಿಸಬಹುದು. ಇದು ಹಳೆಯ ನಿಯಮವೇ ಆಗಿದೆ.
ಜೈಪುರ ಮಾರ್ಗದಲ್ಲಿ ಒಂದು ಪ್ರಕರಣದಲ್ಲಿ, ವಿದ್ಯಾರ್ಥಿಗಳ ತಂಡವು ಒಂದೇ ನಿಜವಾದ ಕಾಯ್ದಿರಿಸದ ಟಿಕೆಟ್ ಖರೀದಿಸಿ, AI ಬಳಸಿ ಅದನ್ನು ಹಲವು ಪ್ರತಿಗಳಾಗಿ ಬದಲಾಯಿಸಿ ಮೊಬೈಲ್‌ನಲ್ಲಿ ತೋರಿಸಿ ಪ್ರಯಾಣಿಸಲು ಪ್ರಯತ್ನಿಸಿದ್ದರು. QR ಕೋಡ್, ಪ್ರಯಾಣ ವಿವರಗಳು, ಶುಲ್ಕ ಮಾಹಿತಿ ಎಲ್ಲವೂ ನಿಜವೆಂಬಂತೆ ಕಾಣುತ್ತಿತ್ತು. ಆದರೆ ಟಿಟಿಇ ಸಿಬ್ಬಂದಿ ಸ್ಕ್ಯಾನ್ ಮಾಡಿ ಪರಿಶೀಲಿಸಿದಾಗ ವಂಚನೆ ಬಯಲಾಯಿತು. ಇದೇ ರೀತಿ ಮುಂಬೈ ಸ್ಥಳೀಯ ರೈಲುಗಳಲ್ಲೂ AI ನಕಲಿ ಸೀಸನ್ ಟಿಕೆಟ್‌ಗಳ ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಘಟನೆಗಳ ನಂತರ ಕೆಲವು ಮಾಧ್ಯಮಗಳು “ಎಲ್ಲ ಮೊಬೈಲ್ ಟಿಕೆಟ್‌ಗಳಿಗೂ ಪ್ರಿಂಟ್ ಕಡ್ಡಾಯ” ಎಂದು ತಪ್ಪು ಸುದ್ದಿ ಹಬ್ಬಿಸಿದ್ದವು. ಆದರೆ ರೈಲ್ವೆ ಇಲಾಖೆ ತಕ್ಷಣ ಸ್ಪಷ್ಟನೆ ನೀಡಿ, ಇದು ಕೇವಲ ಕಾಯ್ದಿರಿಸದ ಟಿಕೆಟ್‌ಗಳಿಗೆ ಸಂಬಂಧಿಸಿದ ಹಳೆಯ ನಿಯಮ ಎಂದು ಹೇಳಿದೆ. ರಿಸರ್ವ್ಡ್ ಇ-ಟಿಕೆಟ್ ಮತ್ತು ಎಂ-ಟಿಕೆಟ್‌ಗಳಿಗೆ ಯಾವುದೇ ಬದಲಾವಣೆಯಿಲ್ಲ.
ವಂಚನೆ ತಡೆಗೆ ರೈಲ್ವೆ ಇತರ ಕ್ರಮಗಳನ್ನೂ ಕೈಗೊಂಡಿದೆ. ಟಿಟಿಇಗಳು ಸಂದೇಹಾಸ್ಪದ ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಿ UTS ಸಂಖ್ಯೆ, ಬಣ್ಣದ ಕೋಡ್ ಪರಿಶೀಲಿಸುತ್ತಾರೆ. ಇದರಿಂದ ನಿಜ-ನಕಲಿ ತಕ್ಷಣ ಗೊತ್ತಾಗುತ್ತದೆ. ಹೆಚ್ಚಾಗಿ ಸ್ಥಳೀಯ ಮತ್ತು ಸಣ್ಣ ದೂರದ ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್ ಬಳಸುವುದರಿಂದ, ಅವರು ಎಚ್ಚರ ವಹಿಸಬೇಕು.





