ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಮಹತ್ವದ ಡಿಜಿಟಲ್ ಸೇವೆಯನ್ನು ಆರಂಭಿಸಿದೆ. ಇಂದಿನಿಂದ ದೇಶಾದ್ಯಂತ ರೈಲು ಪ್ರಯಾಣಿಕರಿಗೆ ಆನ್‌ಲೈನ್ ಲಗೇಜ್ ಬುಕ್ಕಿಂಗ್ ಸೌಲಭ್ಯ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಹೊಸ ವ್ಯವಸ್ಥೆಯ ಮೂಲಕ ಹೆಚ್ಚುವರಿ ಸಾಮಾನು ಸಾಗಿಸಲು ಇನ್ನು ಮುಂದೆ ರೈಲು ನಿಲ್ದಾಣದ ಪಾರ್ಸೆಲ್ ಕಚೇರಿಯಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಮನೆಯಲ್ಲಿಯೇ ಆನ್‌ಲೈನ್ ಮೂಲಕ ಲಗೇಜ್ ಬುಕ್ ಮಾಡಿಕೊಂಡು ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಬಹುದು.
ರೈಲುಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಭಾರದ ಲಗೇಜ್‌ಗಳನ್ನು ಕೋಚ್‌ಗಳ ಒಳಗೆ ತೆಗೆದುಕೊಂಡು ಬರುವುದರಿಂದ ಸಹ-ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಜೊತೆಗೆ ಹೆಚ್ಚುವರಿ ಸಾಮಾನುಗಳಿಗೆ ನಿಯಮಾನುಸಾರ ಮುಂಗಡ ಬುಕ್ಕಿಂಗ್ ಮಾಡುವ ಅವಕಾಶ ನೀಡುವ ಮೂಲಕ ಪಾರದರ್ಶಕ ಹಾಗೂ ಸುಗಮ ಸೇವೆಯನ್ನು ಒದಗಿಸಲು ರೈಲ್ವೆ ಮುಂದಾಗಿದೆ.
ಈ ಸೌಲಭ್ಯವನ್ನು ದೃಢೀಕೃತ (Confirmed) ಟಿಕೆಟ್ ಹೊಂದಿರುವ ಪ್ರಯಾಣಿಕರು ಮಾತ್ರ ಬಳಸಬಹುದಾಗಿದೆ. ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ವೇಳೆ ಅಥವಾ ನಂತರ ಹೆಚ್ಚುವರಿ ಲಗೇಜ್‌ಗೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು. ಇದರಿಂದ ಪಾರ್ಸೆಲ್ ಕಚೇರಿಗೆ ಭೇಟಿ ನೀಡುವ ತೊಂದರೆ ತಪ್ಪುವುದಲ್ಲದೆ, ರೈಲು ಪ್ರಯಾಣದ ವೇಳೆ ಟಿಟಿಇ ಅಥವಾ ರೈಲ್ವೆ ಅಧಿಕಾರಿಗಳ ಪರಿಶೀಲನೆಯಲ್ಲಿ ಹೆಚ್ಚುವರಿ ಲಗೇಜ್‌ಗೆ ವಿಧಿಸಲಾಗುವ ದಂಡದಿಂದಲೂ ಪಾರಾಗಬಹುದು.
ರೈಲ್ವೆ ನಿಯಮಗಳ ಪ್ರಕಾರ ಪ್ರತಿ ಪ್ರಯಾಣ ವರ್ಗಕ್ಕೂ ಉಚಿತ ಲಗೇಜ್ ಸಾಗಿಸುವ ಮಿತಿ ನಿಗದಿಯಾಗಿದೆ. ಎಸಿ ಪ್ರಥಮ ದರ್ಜೆ ಪ್ರಯಾಣಿಕರು 70 ಕೆಜಿ ವರೆಗೆ ಉಚಿತವಾಗಿ ಸಾಮಾನು ಸಾಗಿಸಬಹುದು. ಹೆಚ್ಚುವರಿ ಶುಲ್ಕ ಪಾವತಿಸಿದರೆ ಗರಿಷ್ಠ 150 ಕೆಜಿ ವರೆಗೆ ಅವಕಾಶವಿದೆ. ಪ್ರಥಮ ದರ್ಜೆ ಹಾಗೂ ಎಸಿ 2-ಟೈರ್ ಪ್ರಯಾಣಿಕರಿಗೆ 50 ಕೆಜಿ ಉಚಿತ ಮಿತಿ ಇದ್ದು, ಗರಿಷ್ಠ 100 ಕೆಜಿ ಸಾಗಿಸಬಹುದು. ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಗೆ 40 ಕೆಜಿ ಉಚಿತ ಮಿತಿ ಹಾಗೂ ಶುಲ್ಕ ಪಾವತಿಸಿ 80 ಕೆಜಿ ವರೆಗೆ ಸಾಗಿಸಬಹುದು. ಎರಡನೇ ದರ್ಜೆ ಪ್ರಯಾಣಿಕರಿಗೆ 35 ಕೆಜಿ ಉಚಿತ ಮಿತಿ ಮತ್ತು ಗರಿಷ್ಠ 70 ಕೆಜಿ ಅವಕಾಶವಿದೆ.
ಇನ್ನು ಎಸಿ 3-ಟೈರ್, ಎಸಿ 3-ಇಕಾನಮಿ ಹಾಗೂ ಎಸಿ ಚೇರ್ ಕಾರ್ ಕೋಚ್‌ಗಳಲ್ಲಿ ಉಚಿತ ಹಾಗೂ ಗರಿಷ್ಠ ಲಗೇಜ್ ಮಿತಿ ಎರಡೂ 40 ಕೆಜಿಯಾಗಿರುವುದರಿಂದ, ಈ ಕೋಚ್‌ಗಳಲ್ಲಿ ಹೆಚ್ಚುವರಿ ಲಗೇಜ್ ಅನ್ನು ಕೋಚ್ ಒಳಗೆ ಸಾಗಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ ಇರುವುದಿಲ್ಲ. 40 ಕೆಜಿಗಿಂತ ಹೆಚ್ಚಿನ ಸಾಮಾನು ಇದ್ದರೆ ಅದನ್ನು ಲಗೇಜ್ ವ್ಯಾನ್‌ನಲ್ಲಿ ಪ್ರತ್ಯೇಕವಾಗಿ ಬುಕ್ ಮಾಡಬೇಕಾಗುತ್ತದೆ.
ಉಚಿತ ಮಿತಿಗಿಂತ ಹೆಚ್ಚಿನ ಲಗೇಜ್ ಸಾಗಿಸುವ ಪ್ರಯಾಣಿಕರು ಸಾಮಾನ್ಯ ಲಗೇಜ್ ದರಕ್ಕಿಂತ 1.5 ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಕನಿಷ್ಠ ಶುಲ್ಕ 30 ರೂಪಾಯಿಯಾಗಿದ್ದು, 10 ಕೆಜಿ ಸ್ಲ್ಯಾಬ್ ಆಧಾರದ ಮೇಲೆ ಶುಲ್ಕ ಲೆಕ್ಕ ಹಾಕಲಾಗುತ್ತದೆ. ಕನಿಷ್ಠ 50 ಕಿಲೋಮೀಟರ್ ದೂರವನ್ನು ಲೆಕ್ಕಾಚಾರಕ್ಕೆ ಪರಿಗಣಿಸಲಾಗುತ್ತದೆ.
ಈ ಸೇವೆಯನ್ನು ಬಳಸಲು ಪ್ರಯಾಣಿಕರು ಭಾರತೀಯ ರೈಲ್ವೆಯ ಪಾರ್ಸೆಲ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು. ನಂತರ ಮೂಲ ಮತ್ತು ಗಮ್ಯಸ್ಥಾನ ನಿಲ್ದಾಣ, ಪ್ರಯಾಣಿಸುವ ರೈಲು, ಲಗೇಜ್ ವಿವರಗಳು ಹಾಗೂ ಫಾರ್ವರ್ಡ್ ನೋಟ್ ಭರ್ತಿ ಮಾಡಿ ಅಂದಾಜು ಶುಲ್ಕವನ್ನು ಪರಿಶೀಲಿಸಿ ಆನ್‌ಲೈನ್ ಮೂಲಕ ಬುಕ್ಕಿಂಗ್ ಪೂರ್ಣಗೊಳಿಸಬಹುದು. ರೈಲ್ವೆಯ ಮಾಹಿತಿ ತಂತ್ರಜ್ಞಾನ ವಿಭಾಗವಾದ CRIS ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಜುಲೈ 31ರಿಂದ ದೇಶದ ಎಲ್ಲಾ ವಲಯ ರೈಲ್ವೆಗಳಲ್ಲಿ ಜಾರಿಗೆ ತರಲು ರೈಲ್ವೆ ಮಂಡಳಿ ನಿರ್ದೇಶನ ನೀಡಿದೆ. ಈ ಹೊಸ ಸೇವೆಯಿಂದ ಹೆಚ್ಚುವರಿ ಲಗೇಜ್ ಸಾಗಿಸುವ ಪ್ರಕ್ರಿಯೆ ವೇಗವಾಗಿ, ಸುಲಭವಾಗಿ ಮತ್ತು ಸಂಪೂರ್ಣ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ.
