ಗಡಿಯಲ್ಲಿ ಸಿಆರ್‌ಪಿಎಫ್ ಅಪರೇಷನ್‌ಗೆ ಇಬ್ಬರು ಉಗ್ರರು ಬಲಿ

Your paragraph text (23)

ನವೆಂಬರ್ 11ರಂದು ಸಿಆರ್‌ಪಿಎಫ್ ಯೋಧರ ಮೇಲೆ ನಡೆದಿದ್ದ ದಾಳಿಗೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಇಂದು ನಡೆದ ಭೀಕರ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.

ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಮಾಡಿದ್ದ ಲತೀಫ್ ಹತ

ಕಳೆದ ನವೆಂಬರ್ 11ರಂದು ಜಮ್ಮುವಿನ ಕುಲ್ಗಾಂ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರ ತಂಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದರು. ಅಂದು ಯೋಧರ ಪ್ರತಿದಾಳಿಯ ನಡುವೆಯೂ ಪರಾರಿಯಾಗಿದ್ದ ಉಗ್ರರಿಗೆ ಕಡೆಗೂ ಭಾರತೀಯ ಸೇನೆ ತಕ್ಕ ಶಾಸ್ತಿ ಮಾಡಿದೆ. ಅಂದು ಯೋಧರ ಮೇಲಿನ ದಾಳಿಗೆ ಮಾಸ್ಟರ್ ಮೈಂಡ್ ಆಗಿದ್ದ ಕುಖ್ಯಾತ ಉಗ್ರ ಲತೀಫ್ ನನ್ನು ಭಾರತೀಯ ಸೇನೆ ಸದೆಬಡಿದಿದೆ.

ಭಾರತದ ದಿಟ್ಟ ಕ್ರಮದಿಂದ ಪಾಕಿಸ್ತಾನಕ್ಕೆ ನಡುಕ

ಉಗ್ರರ ತವರು ಎಂದೇ ಹಣೆಪಟ್ಟಿ ಹೊತ್ತಿರುವ ಪಾಕಿಸ್ತಾನಕ್ಕೆ ಭಾರತದ ಈ ದಿಢೀರ್ ಕಾರ್ಯಾಚರಣೆಯಿಂದ ತೀವ್ರ ಟೆನ್ಶನ್ ಶುರುವಾಗಿದೆ. ಇಷ್ಟು ದಿನ ಶಾಂತಿ ಒಪ್ಪಂದದ ಹಾದಿಯಲ್ಲಿದ್ದ ಭಾರತ, ಯೋಧರ ಮೇಲಿನ ದಾಳಿಯ ಬಳಿಕ ಉಗ್ರರ ಹೆಡೆಮುರಿಕೆಯಾಗುವಂತೆ ಕಠಿಣ ಕ್ರಮ ಕೈಗೊಂಡಿರುವುದು ಪಾಕ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

ಭಾರತ-ಪಾಕ್ ಗಡಿಗಳಲ್ಲಿ ಹೈ ಅಲರ್ಟ್ ಘೋಷಣೆ

ಉಗ್ರರ ಸಂಹಾರದ ಬೆನ್ನಲ್ಲೇ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಗಡಿಯಲ್ಲಿ ಸೇನೆಯ ಕಣ್ಗಾವಲು ಹಾಗೂ ಗಸ್ತನ್ನು ತೀವ್ರಗೊಳಿಸಲಾಗಿದೆ. ಯಾವುದೇ ಅಚಾತುರ್ಯ ನಡೆಯದಂತೆ ಎಚ್ಚೆತ್ತುಕೊಂಡಿರುವ ಸೇನೆ, ಪ್ರತಿಯೊಂದು ಚಲನವಲನದ ಮೇಲೂ ಕಣ್ಣಿಟ್ಟಿದೆ.

ಪಾಕ್‌ಗೆ ಕಾಡುತ್ತಿದೆ ‘ಆಪರೇಷನ್ ಸಿಂಧೂರ’ದ ಭೀತಿ

ಪೆಹಲ್ಗಾಂ ದಾಳಿಯ ಬಳಿಕ ಪಾಕಿಸ್ತಾನಕ್ಕೆ ‘ಆಪರೇಷನ್ ಸಿಂಧೂರ’ದ ಮೂಲಕ ಭಾರತ ತಕ್ಕ ಪಾಠ ಕಲಿಸಿತ್ತು. ಈಗ ಮತ್ತೊಮ್ಮೆ ಅಂತಹದ್ದೇ ಕಠಿಣ ಕಾರ್ಯಾಚರಣೆಯ ಭೀತಿ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಅಂದು ಭಾರತೀಯ ಸೇನೆಯ ಪರಾಕ್ರಮಕ್ಕೆ ನುಜ್ಜುಗುಜ್ಜಾಗಿದ್ದ ಉಗ್ರರ ನೆನೆದು ಪಾಕ್ ನರ್ವಸ್ ಆಗಿದೆ.

ಒಟ್ಟಿನಲ್ಲಿ, ಜಮ್ಮುವಿನಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿರುವುದು ದೇಶದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಕರ್ತವ್ಯದ ವೇಳೆ ಗಾಯಗೊಂಡಿರುವ ಸಿಆರ್‌ಪಿಎಫ್ ಯೋಧರು ಆದಷ್ಟು ಬೇಗ ಗುಣಮುಖರಾಗಿ ಮರಳಲಿ ಎಂದು ಇಡೀ ದೇಶವೇ ಹಾರೈಸುತ್ತದೆ.

Exit mobile version