ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪ್ರಭಾವ ಹಾಗೂ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದ ಮೇಲೆ ಕಣ್ಣಿಡಲು ವೈರಿ ದೇಶಗಳು ನಿರಂತರವಾಗಿ ಹೊಸ ಹೊಸ ಕುತಂತ್ರಗಳನ್ನು ಹೆಣೆಯುತ್ತಲೇ ಇರುತ್ತವೆ. ಅದರಲ್ಲೂ ಚೀನಾ ಮತ್ತು ಪಾಕಿಸ್ತಾನದಂಥ ದೇಶಗಳು ಗಡಿಯಲ್ಲಿ ಭಾರತವನ್ನು ನೇರವಾಗಿ ಎದುರಿಸಲಾಗದೆ, ಇದೀಗ ಮತ್ತೊಂದು ಕೀಳು ತಂತ್ರಕ್ಕೆ ಮೊರೆ ಹೋಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಭಾರತೀಯ ಸೇನೆಯು ದೇಶಾದ್ಯಂತ ಮತ್ತಷ್ಟು ಹೈ ಅಲರ್ಟ್ ಘೋಷಿಸಿದೆ.
ಸೇನಾ ಅಧಿಕಾರಿಗಳೇ ಪಾಕ್ ಬೆಡಗಿಯರ ಟಾರ್ಗೆಟ್ :- ಮೂಲಗಳ ಪ್ರಕಾರ, ಗಡಿಯಲ್ಲಿ ಭಾರತದ ಸೈನ್ಯವನ್ನು ಎದುರಿಸಲು ಅಶಕ್ತವಾಗಿರುವ ಪಾಕಿಸ್ತಾನ ಹಾಗೂ ಚೀನಾ, ಈಗ ರಕ್ಷಣಾ ಸಿಬ್ಬಂದಿಯನ್ನು ದಾರಿ ತಪ್ಪಿಸಲು ಸುಂದರ ಯುವತಿಯರನ್ನೇ (ಹನಿಟ್ರ್ಯಾಪ್ ಅಸ್ತ್ರ) ಛೂ ಬಿಡುತ್ತಿವೆ ಎಂಬ ಸಂಗತಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ, ಭಾರತೀಯ ಸೇನೆಯು ತನ್ನ ಸಿಬ್ಬಂದಿಯ ಚಲನವಲನಗಳ ಮೇಲೆ ತೀವ್ರ ಕಟ್ಟೆಚ್ಚರ ವಹಿಸಿದೆ.
ಬಲೆಗೆ ಬಿದ್ದ ಬೆಡಗಿಯರು ಅರೆಸ್ಟ್: ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಾ, ಭಾರತದ ನೌಕಾಪಡೆಯ ರಹಸ್ಯಗಳನ್ನು ಕದಿಯಲು ಯತ್ನಿಸಿದ್ದ ಮಹಿಳಾ ಏಜೆಂಟರು ಹಾಗೂ ಶಂಕಿತರ ಬಂಧನವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪದಡಿ ನೌಕಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ಅವರಿಂದ ಮಹತ್ವದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಅಲ್ಲದೆ, ಈ ಹಿಂದೆ ಕರ್ನಾಟಕದ ಕರಾವಳಿಯ ಪ್ರಮುಖ ನೌಕಾನೆಲೆಯಾದ ಕಾರವಾರದ ಅಧಿಕಾರಿಯೊಬ್ಬರಿಗೂ ಕೂಡ ಇಂತಹುದೇ ಬಲೆ ಬೀಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ಭದ್ರತಾ ಪಡೆಗಳು ಮತ್ತು ಪೊಲೀಸರು ‘ಆಪರೇಷನ್ ಫೈರ್‌ವಾಲ್’ ಹೆಸರಿನಲ್ಲಿ ದೇಶಾದ್ಯಂತ ಜಾಲಬೆಸೆದು, ಪಾಕ್ ಬೇಹುಗಾರರನ್ನು ಬೇಟೆಯಾಡಲು ಶುರು ಹಚ್ಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ತನ್ನ ಪಾಡಿಗೆ ತಾನು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದರೂ ಸುಮ್ಮನಿರದೆ ಕದನ ವಿರಾಮ ಉಲ್ಲಂಘನೆ ಹಾಗೂ ಗೂಢಚಾರಿಕೆಗೆ ಯತ್ನಿಸುತ್ತಿರುವ ಪಾಕಿಸ್ತಾನದ ಈ ಚಾಳಿ ಮುಂದುವರಿದರೆ, ಅದಕ್ಕೆ ತಕ್ಕ ಬೆಲೆಯನ್ನು ಆ ರಾಷ್ಟ್ರ ತೆರಬೇಕಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
