ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತು ಮೇಲಿನ ಸುಂಕವನ್ನು ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಜಾಗತಿಕ ತೈಲ ಮಾರುಕಟ್ಟೆಯ ಬದಲಾವಣೆಗಳು ಹಾಗೂ ದೇಶೀಯ ಇಂಧನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಕೇಂದ್ರ ಮಾಡಿದೆ.
ಹೊಸ ದರಗಳ ಪ್ರಕಾರ ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ಪ್ರತಿ ಲೀಟರ್‌ಗೆ 13.5 ರೂ.ನಿಂದ 14 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ವಿಮಾನ ಇಂಧನದ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 9.5 ರೂ.ನಿಂದ 12.5 ರೂ.ಗೆ ಏರಿಸಲಾಗಿದೆ. ಆದರೆ ಪೆಟ್ರೋಲ್ ರಫ್ತು ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 1.5 ರೂ. ಸುಂಕ ಮುಂದುವರಿಯಲಿದೆ.
ಈ ತೆರಿಗೆ ಬದಲಾವಣೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಅಂದರೆ, ಸಾಮಾನ್ಯ ಗ್ರಾಹಕರು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಏರಿಕೆ ಅಥವಾ ಇಳಿಕೆಯನ್ನು ಈ ಕಾರಣದಿಂದ ಎದುರಿಸುವ ಸಾಧ್ಯತೆ ಇಲ್ಲ.
ಇರಾನ್, ಇಸ್ರೇಲ್, ಅಮೆರಿಕ ದೇಶಗಳ ಸಂಘರ್ಷ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಳಿತದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಲವು ತೈಲ ಸಂಸ್ಕರಣಾ ಕಂಪನಿಗಳು ದೇಶೀಯ ಮಾರುಕಟ್ಟೆಗಿಂತ ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಇಂಧನ ರಫ್ತು ಮಾಡುವ ಸಾಧ್ಯತೆಯನ್ನು ನಿಯಂತ್ರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ದೇಶದೊಳಗೆ ಇಂಧನ ಲಭ್ಯತೆ ಖಚಿತಪಡಿಸಿಕೊಳ್ಳುವುದು ಮತ್ತು ದೇಶೀಯ ಗ್ರಾಹಕರಿಗೆ ಆದ್ಯತೆ ನೀಡುವಂತೆ ಕಂಪನಿಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
ಪರಿಷ್ಕೃತ ದರಗಳು ಜೂನ್ 16ರಿಂದಲೇ ಅಂದರೆ ಇಂದಿನಿಂದಲೇ ಜಾರಿಗೆ ತಂದಿದೆ. ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ತೈಲ ಬೆಲೆಗಳನ್ನು ಪರಿಶೀಲಿಸಿ ರಫ್ತು ಸುಂಕದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುತ್ತದೆ. ಜಾಗತಿಕ ಕಚ್ಚಾ ತೈಲ ಬೆಲೆ ಮತ್ತಷ್ಟು ಇಳಿಕೆಯಾದರೆ ಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಬದಲಾವಣೆ ಕಾಣುವ ಸಾಧ್ಯತೆಯಿದೆ.
