ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾದ ಆರೋಪದ ಹಿನ್ನೆಲೆಯಲ್ಲಿ ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾ ಅವರನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಎರಡು ದಿನಗಳ ಬಳಿಕ ಈ ಬಂಧನವಾಗಿದೆ. ವೇಗವಾಗಿ ಬಂದ ಬೈನ್ಸ್ಲಾ ಅವರ ಸಿಯಾಜ್ ಕಾರು, ಶಿವಾನಿ ಚೌಹಾಣ್ ಎಂಬ ಬೈಕ್ ಸವಾರಿಯ ಅಪ್ರಿಲಿಯಾ ಆರ್‌ಎಸ್ 457 ಬೈಕ್‌ಗೆ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಪಘಾತದ ಬಳಿಕ ಚಾಲಕ ಸ್ಥಳದಲ್ಲಿ ನಿಲ್ಲದೆ ತೆರಳಿದ್ದೇಕೆ ಎಂದು ಶಿವಾನಿ ಪ್ರಶ್ನಿಸಿದ್ದರು. ಅಲ್ಲದೆ, ತಾನು ಮಹಿಳಾ ಬೈಕರ್ ಆಗಿರುವ ಕಾರಣಕ್ಕೇ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದರು.
ಈ ಆರೋಪಗಳ ಬೆನ್ನಲ್ಲೇ ಗುರುಗ್ರಾಮ ಪೊಲೀಸರು ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109ರ ಅಡಿಯಲ್ಲಿ ಕೊಲೆ ಯತ್ನದ ಆರೋಪವನ್ನೂ ಸೇರಿಸಿದ್ದಾರೆ. ಇದರ ಜತೆಗೆ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಆರೋಪಕ್ಕೆ ಸಂಬಂಧಿಸಿದ ಸೆಕ್ಷನ್ 281 ಹಾಗೂ ಗಾಯ ಉಂಟುಮಾಡಿದ ಆರೋಪದ ಸೆಕ್ಷನ್ 125ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸೆಕ್ಟರ್-56 ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದರಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆಯುವ ದೃಶ್ಯ ಸೆರೆಯಾಗಿದೆ. ಮತ್ತೊಂದು ವಿಡಿಯೋವನ್ನು ಬೈಕರ್‌ಗಳ ಹಿಂದಿನಿಂದ ಬರುತ್ತಿದ್ದ ಸವಾರರೊಬ್ಬರು ಚಿತ್ರೀಕರಿಸಿದ್ದು, ಕಾರು ಚಾಲಕ ಮೊದಲು ಬೈಕ್ ಸವಾರರಿಗೆ ನಿಲ್ಲುವಂತೆ ಸೂಚಿಸುವುದು, ಬಳಿಕ ಕಾರು ಬೈಕ್‌ಗೆ ಡಿಕ್ಕಿ ಹೊಡೆಯುವುದು ಕಂಡುಬರುತ್ತದೆ.
ಆದರೆ, ಬೈನ್ಸ್ಲಾ ಅವರು ತಾವು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯು-ಟರ್ನ್ ಬಳಿ ಕಾರಿನ ನಿಯಂತ್ರಣ ತಪ್ಪಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಸುಮಾರು 20ರಿಂದ 22 ಬೈಕ್ ಸವಾರರು ವೇಗವಾಗಿ ತಮ್ಮನ್ನು ಹಿಂದಿಕ್ಕಿ ಹೋಗಿದ್ದರು. ಅವರಲ್ಲಿ ಯುವತಿಯೊಬ್ಬರು ಬೈಕ್ ಚಲಾಯಿಸುತ್ತಿರುವುದು ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಡಿಕ್ಕಿ ಸಂಭವಿಸಿದ್ದು ತಮ್ಮ ತಪ್ಪು ಎಂದು ಒಪ್ಪಿಕೊಂಡಿರುವ ಬೈನ್ಸ್ಲಾ, ಅಪಘಾತದ ಬಳಿಕ ಸ್ಥಳದಲ್ಲಿ ನಿಲ್ಲದಿರುವುದಕ್ಕೂ ಕಾರಣ ನೀಡಿದ್ದಾರೆ. ಬೈಕ್ ಸವಾರರ ಗುಂಪು ತಮ್ಮನ್ನು ಹಾಗೂ ಕುಟುಂಬದ ಸದಸ್ಯರನ್ನು ಹಲ್ಲೆ ಮಾಡಬಹುದು ಎಂಬ ಭಯದಿಂದ ಅಲ್ಲಿಂದ ತೆರಳಿದ್ದಾಗಿ ಹೇಳಿದ್ದಾರೆ. ಘಟನೆ ವೇಳೆ ತಾವು ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದೆ ಎಂದು ತಿಳಿಸಿದ್ದಾರೆ.
ಬೈನ್ಸ್ಲಾ ತಮ್ಮನ್ನು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಜಿಮ್ ಮಾಲೀಕ ಎಂದು ಪರಿಚಯಿಸಿಕೊಂಡಿದ್ದಾರೆ. ವಿವಾದ ತೀವ್ರಗೊಂಡ ಬಳಿಕ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





