ಉತ್ತರ ಗೋವಾದ ಅರ್‌ಪೋರಾದಲ್ಲಿ ನಡೆದ ಭಯಾನಕ ಅಗ್ನಿ ಅವಘಡದಲ್ಲಿ 23 ಜನರು ದುರ್ಮರಣ ಹೊಂದಿದ್ದಾರೆ. ಮಧ್ಯರಾತ್ರಿ ನೈಟ್‌ಕ್ಲಬ್‌ನ ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪೂರ್ತಿ ಕಟ್ಟಡವೇ ಬೆಂಕಿಯಲ್ಲಿ ಸಿಲುಕಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಸಿಬ್ಬಂದಿ ಮತ್ತು ಅಡುಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು. ಇವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಜೊತೆಗೆ 3-4 ಮಂದಿ ಪ್ರವಾಸಿಗರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ತೀವ್ರ ನಿಗಾವಣೆ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ತನಿಖೆಯಲ್ಲಿ ಅಗ್ನಿ ಸುರಕ್ಷಾ ನಿಯಮಗಳ ಗಂಭೀರ ಉಲ್ಲಂಘನೆ ಬಯಲಾಗಿದೆ. ತುರ್ತು ನಿರ್ಗಮನ ದ್ವಾರಗಳ ಕೊರತೆ, ಅಗ್ನಿಶಾಮಕ ಯಂತ್ರಗಳ ಕೊರತೆ ಮತ್ತು ಅತಿಯಾದ ಜನದಟ್ಟಣೆಯೇ ಹೆಚ್ಚಿನ ಪ್ರಾಣಹಾನಿಗೆ ಕಾರಣವೆಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಮಾತ್ರ ಆರಂಭವಾದ ಈ ಜನಪ್ರಿಯ ನೈಟ್‌ಕ್ಲಬ್ ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್‌ಪೋರಾ ಗ್ರಾಮದಲ್ಲಿತ್ತು. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎಲ್ಲ 23 ಮೃತದೇಹಗಳನ್ನು ಹೊರತೆಗೆದು ಬಾಂಬೊಲಿಯ ಗೋವಾ ಮೆಡಿಕಲ್ ಕಾಲೇಜಿಗೆ ಪೋಸ್ಟ್‌ಮಾರ್ಟಂಗಾಗಿ ಕಳುಹಿಸಲಾಗಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಘಟನೆಯ ಬಗ್ಗೆ ತೀವ್ರ ದಿಗಿಲು ವ್ಯಕ್ತಪಡಿಸಿದ್ದು, “ಈ ದುರಂತ ತಿಳಿದು ತುಂಬಾ ನೋವಾಗಿದೆ. ಮೃತರ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು” ಎಂದು ಹೇಳಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆಯೂ, ಉನ್ನತ ಮಟ್ಟದ ತನಿಖೆ ನಡೆಸಿ ಶೀಘ್ರ ವರದಿ ನೀಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
