ನಕಲಿ ಔಷಧಿಗಳಿಗೆ ಕಡಿವಾಣ; ಕೇಂದ್ರದಿಂದ ಹೊಸ ಮಾರ್ಗಸೂಚಿ

Your paragraph text (9)

ನಕಲಿ ಔಷಧಿಗಳ ಜಾಲಕ್ಕೆ ಕಡಿವಾಣ ಹಾಕುವ ಜೊತೆಗೆ ನೋವು ನಿವಾರಕ ಮಾತ್ರೆಗಳು ಹಾಗೂ ಆಂಟಿಬಯೋಟಿಕ್‌ಗಳ ಅಸಮರ್ಪಕ ಬಳಕೆಯನ್ನು ನಿಯಂತ್ರಿಸಲು ಕೇಂದ್ರ ಔಷಧ ನಿಯಂತ್ರಣ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವೈದ್ಯರು, ಫಾರ್ಮಾಸಿಸ್ಟ್‌ಗಳು, ರಿಟೇಲರ್‌ಗಳು, ಡಿಸ್ಟ್ರಿಬ್ಯೂಟರ್‌ಗಳು, ಆಸ್ಪತ್ರೆಗಳು ಹಾಗೂ ಇತರೆ ಹೆಲ್ತ್‌ಕೇರ್ ಸಂಸ್ಥೆಗಳು ಔಷಧಿಗಳ ಖರೀದಿ ಮತ್ತು ಸರಬರಾಜಿನ ವೇಳೆ ಅನುಸರಿಸಬೇಕಾದ ಹಲವು ನಿಯಮಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪ್ರಮುಖ 5 ಅಂಶಗಳು

  1. ವೈದ್ಯರ ಚೀಟಿ ಅಗತ್ಯವಿರುವ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಾರದು.
  2. ಆಂಟಿಬಯೋಟಿಕ್ ಮತ್ತು ನೋವು ನಿವಾರಕಗಳ ಸ್ವಯಂ ಚಿಕಿತ್ಸೆಯನ್ನು ಪ್ರೋತ್ಸಾಹಿಸಬಾರದು.
  3. ಆಸ್ಪತ್ರೆಗಳು ಔಷಧಿ ಬಳಕೆಯನ್ನು ಮಾನಿಟರ್ ಮಾಡಿ, ರೋಗಿಗಳಿಗೆ ಸರಿಯಾದ ಕೌನ್ಸೆಲಿಂಗ್ ನೀಡಬೇಕು.
  4. ಕಿಡ್ನಿ, ಹೃದಯ ಸಮಸ್ಯೆ ಹಾಗೂ ನಿರ್ಜಲೀಕರಣ ಹೊಂದಿರುವವರಿಗೆ ನೋವು ನಿವಾರಕ ನೀಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
  5. ತಪ್ಪು ಆಂಟಿಬಯೋಟಿಕ್, ತಪ್ಪು ಡೋಸ್, ಅನಗತ್ಯ ಕಾಂಬಿನೇಷನ್ ಮತ್ತು ದೀರ್ಘಕಾಲದ ಬಳಕೆಯನ್ನು ತಪ್ಪಿಸಬೇಕು.

ಫಾರ್ಮಾಸಿಸ್ಟ್, ರಿಟೇಲರ್, ಡಿಸ್ಟ್ರಿಬ್ಯೂಟರ್‌ಗಳಿಗೆ ಸೂಚನೆ

ಔಷಧಿ ಮಾರಾಟಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. Drugs Rules, 1945ರ ನಿಯಮಗಳಂತೆ ವೈದ್ಯರ ಚೀಟಿ ಅಗತ್ಯವಿರುವ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಾರದು.

ಫಾರ್ಮಾಸಿಸ್ಟ್‌ಗಳು ಸಾರ್ವಜನಿಕರನ್ನು ಸ್ವಯಂ ಚಿಕಿತ್ಸೆಗೆ ಪ್ರೋತ್ಸಾಹಿಸಬಾರದು. ಅದರಲ್ಲೂ ಆಂಟಿಬಯೋಟಿಕ್‌ಗಳು ಹಾಗೂ ನೋವು ನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳುವಂತೆ ಸೂಚಿಸುವುದನ್ನು ತಪ್ಪಿಸಬೇಕು. ಔಷಧಿಗಳ ಲೇಬಲ್‌ನಲ್ಲಿ ನಮೂದಿಸಿರುವ ಎಚ್ಚರಿಕೆಗಳು ಹಾಗೂ ಮಾರಾಟಕ್ಕೆ ಸಂಬಂಧಿಸಿದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಆಸ್ಪತ್ರೆ, ಹೆಲ್ತ್‌ಕೇರ್ ಸಂಸ್ಥೆಗಳಿಗೆ ಮಾರ್ಗಸೂಚಿ

ಆಸ್ಪತ್ರೆಗಳು ಹಾಗೂ ಹೆಲ್ತ್‌ಕೇರ್ ಸಂಸ್ಥೆಗಳು ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳ ಬಳಕೆಯನ್ನು ನಿಯಮಿತವಾಗಿ ಮಾನಿಟರ್ ಮಾಡುವ ವ್ಯವಸ್ಥೆ ಹೊಂದಿರಬೇಕು. ಔಷಧಿ ನೀಡುವ ಮೊದಲು ವೈದ್ಯರ ಚೀಟಿಯನ್ನು ಪರಿಶೀಲಿಸುವುದು ಹಾಗೂ ರೋಗಿಗಳಿಗೆ ಔಷಧಿಯ ಸರಿಯಾದ ಬಳಕೆಯ ಕುರಿತು ಅಗತ್ಯ ಕೌನ್ಸೆಲಿಂಗ್ ನೀಡುವುದು ಕಡ್ಡಾಯವಾಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವೈದ್ಯರು ಔಷಧಿ ಬರೆಯುವಾಗ ಎಚ್ಚರಿಕೆ

ವೈದ್ಯರು ರೋಗಿಯ ವಯಸ್ಸು, ಇತರೆ ಕಾಯಿಲೆಗಳು ಹಾಗೂ ಅವರು ಈಗಾಗಲೇ ಸೇವಿಸುತ್ತಿರುವ ಔಷಧಿಗಳನ್ನು ಪರಿಗಣಿಸಿ, ಅಗತ್ಯವಿದ್ದಾಗ ಮಾತ್ರ ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳನ್ನು ಶಿಫಾರಸು ಮಾಡಬೇಕು.

ಔಷಧಿ ನೀಡುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಕಡಿಮೆ ಪರಿಣಾಮಕಾರಿ ಡೋಸ್ ಮತ್ತು ಕಡಿಮೆ ಅವಧಿಗೆ ಮಾತ್ರ ಔಷಧಿ ನೀಡುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಕಿಡ್ನಿ ಸಮಸ್ಯೆ ಇರುವವರು, ನಿರ್ಜಲೀಕರಣಕ್ಕೆ ಒಳಗಾದವರು ಹಾಗೂ ಹೃದಯ ಸಂಬಂಧಿತ ಕಾಯಿಲೆ ಹೊಂದಿರುವವರಿಗೆ ನೋವು ನಿವಾರಕಗಳನ್ನು ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಆಂಟಿಬಯೋಟಿಕ್‌ಗಳನ್ನು ವಿವೇಚನೆಯಿಂದ ಬಳಸಬೇಕು. ಸೋಂಕು ಉಂಟಾಗಿರುವ ಸ್ಥಳ, ಅದರ ತೀವ್ರತೆ, ಸಾಧ್ಯವಿರುವ ಬ್ಯಾಕ್ಟೀರಿಯಾ ಹಾಗೂ ಲಭ್ಯವಿರುವ ಲ್ಯಾಬ್ ವರದಿಗಳನ್ನು ಪರಿಗಣಿಸಿ ಸೂಕ್ತ ಆಂಟಿಬಯೋಟಿಕ್ ಆಯ್ಕೆ ಮಾಡಬೇಕು.

ಅನಗತ್ಯ ಕಾಂಬಿನೇಷನ್ ಔಷಧಿಗಳು, ತಪ್ಪಾದ ಆಂಟಿಬಯೋಟಿಕ್ ಆಯ್ಕೆ, ತಪ್ಪು ಡೋಸ್ ಹಾಗೂ ಅಗತ್ಯಕ್ಕಿಂತ ಹೆಚ್ಚು ದಿನಗಳ ಕಾಲ ಆಂಟಿಬಯೋಟಿಕ್ ಬಳಕೆಯನ್ನು ತಪ್ಪಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ. 

 

Exit mobile version