ನವದೆಹಲಿ: ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗವು ಗುರುವಾರ ‘ವಿಷಲ್’ (Whistle) ಚಿಹ್ನೆಯನ್ನು ಅಧಿಕೃತವಾಗಿ ನೀಡಿದೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷವು ಇದೇ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಲಿದೆ.
ಮಂಗಳವಾರವಷ್ಟೇ ಚೆನ್ನೈನಲ್ಲಿ ನಡೆದ ಪಕ್ಷದ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲಿ, ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕ ಆಡಳಿತದ ಕುರಿತು ಚರ್ಚಿಸಲಾಗಿತ್ತು. ಜನವರಿ 16 ರಂದು ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಪ್ರಚಾರ ಸಂಘಟಿಸಲು ವಿಜಯ್ 12 ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಪ್ರಣಾಳಿಕೆಯು ಭ್ರಷ್ಟಾಚಾರ ಮುಕ್ತ ಮತ್ತು ಜಾತಿರಹಿತ ತಮಿಳುನಾಡಿನ ಪರಿವರ್ತನೆಯ ದೃಷ್ಟಿಕೋನವನ್ನು ಹೊಂದಿರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷ ಸ್ಥಾಪನೆಯಾದ ದಿನದಿಂದಲೂ ವಿಜಯ್ ಅವರ ಈ ಟಿವಿಕೆ ಪಕ್ಷವು ಅಡೆತಡೆಗಳನ್ನ ಎದುರಿಸುತ್ತಲೇ ಬಂದಿದೆ. ಪನ್ರುತಿ ಶಾಸಕ ಟಿ. ವೇಲುಮುರುಗನ್ ಅವರ ತಮಿಳಿಗ ವಳುರಿಮೈ ಕಚ್ಚಿ ಪಕ್ಷವು ಟಿವಿಕೆ ಎಂಬ ಸಂಕ್ಷಿಪ್ತ ಹೆಸರಿನ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಈ ಆಕ್ಷೇಪವನ್ನು ಮೀರಿ ಚುನಾವಣಾ ಆಯೋಗವು ವಿಜಯ್ ಅವರ ಪಕ್ಷದ ನೋಂದಣಿಗೆ ಮಾನ್ಯತೆ ನೀಡಿರುವುದು ಈಗ ವಿಷಲ್ ಚಿಹ್ನೆಯ ಮೂಲಕ ದೃಢಪಟ್ಟಿದೆ.
ನಮ್ಮದು ಯಾವುದೇ ಗುಲಾಮಿ ಮೈತ್ರಿಕೂಟಕ್ಕೆ ಸೇರುವ ಪಕ್ಷವಲ್ಲ. ನಮ್ಮ ಮೈತ್ರಿಕೂಟವು ಸ್ವಾರ್ಥಕ್ಕಿಂತ ಹೆಚ್ಚಾಗಿ ಸ್ವಾಭಿಮಾನವನ್ನು ಆಧರಿಸಿದೆ ಎಂದು ವಿಜಯ್ ಘೋಷಿಸಿದ್ದಾರೆ. 2026ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೈದ್ಧಾಂತಿಕ ಶತ್ರು ಮತ್ತು ಡಿಎಂಕೆಯನ್ನು ರಾಜಕೀಯ ಶತ್ರು ಎಂದು ಕರೆದಿರುವ ವಿಜಯ್, ಈ ಉಭಯ ಪಕ್ಷಗಳ ವಿರುದ್ಧ ಏಕಾಂಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.
ತಮ್ಮ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್, ಈಗ ರಾಜಕೀಯದಲ್ಲಿ ವಿಷಲ್ ಊದುವ ಮೂಲಕ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ. ಇದು ದಕ್ಷಿಣ ಭಾರತದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ದಳಪತಿ ವಿಜಯ್‌ಗೆ ಮುಸ್ಲಿಮರು ಬೆಂಬಲ ನೀಡಬಾರದು: ನಟನ ವಿರುದ್ಧ ಮೌಲ್ವಿಗಳ ಆಕ್ರೋಶ
ತಮಿಳುನಾಡಿನ ಪ್ರಸಿದ್ಧ ನಟ ಮತ್ತು ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ವಿರುದ್ಧ ಉತ್ತರ ಪ್ರದೇಶದ ಮೌಲಾನಾ ಶಹಾಬುದ್ದೀನ್ ರಝವಿ ಫತ್ವಾ ಹೊರಡಿಸಿದ್ದಾರೆ. “ಮುಸ್ಲಿಮರು ವಿಜಯ್‌ಗೆ ಬೆಂಬಲ ನೀಡಬಾರದು ಮತ್ತು ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು” ಎಂದು ಈ ಫತ್ವಾದಲ್ಲಿ ಹೇಳಲಾಗಿದೆ.
ದಳಪತಿ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ನಿರ್ವಹಣೆಯ ಅಂಗವಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿದ್ದರು. ಈ ಕೂಟಕ್ಕೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಆಹ್ವಾನಿತರ ಪಟ್ಟಿಯಲ್ಲಿ ಜೂಜುಕೋರರು ಮತ್ತು ಮದ್ಯಪಾನಿಗಳೂ ಇದ್ದಾರೆ ಎಂಬ ಆರೋಪಗಳು ಕೇಳಿಬಂದವು. ಇದರಿಂದ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಲ್ಲಿ ಅಸಮಾಧಾನ ಉಂಟಾಯಿತು.
ಮೌಲಾನಾ ಶಹಾಬುದ್ದೀನ್ ರಝ್ವಿಯವರು ‘ಎಎನ್‌ಐ’ ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ವಿಜಯ್ ಅವರ ನಡೆ ಇಸ್ಲಾಂ ಧರ್ಮದ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ವಿಜಯ್ ಅವರು ತಮ್ಮ ಸಿನಿಮಾಗಳಲ್ಲಿ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರಂತೆ ಚಿತ್ರಿಸುತ್ತಾರೆ. ಇಂತಹ ವ್ಯಕ್ತಿಯು ಇಫ್ತಾರ್ ಕೂಟದ ಹೆಸರಿನಲ್ಲಿ ಮುಸ್ಲಿಂ ಸಮಾಜದ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ತಮಿಳುನಾಡಿನ ಸುನ್ನಿ ಮುಸ್ಲಿಂ ಸಮುದಾಯದಿಂದ ಫತ್ವಾ ನೀಡಬೇಕೆಂಬ ಒತ್ತಡ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದಾಗಿ ಅವರು ತಿಳಿಸಿದರು. “ಮುಸ್ಲಿಮರು ವಿಜಯ್‌ಗೆ ಬೆಂಬಲ ನೀಡಬಾರದು, ಅವರ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗಬಾರದು ಎಂದು ನಾನು ಫತ್ವಾ ಹೊರಡಿಸಿದ್ದೇನೆ,” ಎಂದು ಶಹಾಬುದ್ದೀನ್ ಹೇಳಿದರು.
ವಿಜಯ್ ವಿರುದ್ಧ ಅಣ್ಣಾಮಲೈ ಆಕ್ರೋಶ
ಈ ವಿವಾದವನ್ನು ಬಿಜೆಪಿ ನಾಯಕ ಅಣ್ಣಾಮಲೈ ಕೂಡಾ ವಿಜಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. “ನೀವು ಸಿನಿಮಾದಲ್ಲಿ ಕುಡಿಯುತ್ತೀರಿ, ಧೂಮಪಾನ ಮಾಡುತ್ತೀರಿ. ಇಫ್ತಾರ್ ಕೂಟದ ಮಹತ್ವ ನಿಮಗೆ ಗೊತ್ತಿಲ್ಲ. ಮುಸ್ಲಿಂ ಸಂಪ್ರದಾಯವನ್ನು ಅವಮಾನ ಮಾಡುವ ಕಾರ್ಯ ಇದಾಗಿದೆ,” ಎಂದು ಅಣ್ಣಾಮಲೈ ಟೀಕಿಸಿದರು.
ವಿಜಯ್ ಅವರ ಅಭಿಮಾನಿಗಳು ಹಾಗೂ ಟಿವಿಕೆ ಪಕ್ಷದ ಕಾರ್ಯಕರ್ತರು ಈ ಆರೋಪಗಳನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. “ವಿಜಯ್ ಯಾವಾಗಲೂ ಎಲ್ಲಾ ಧರ್ಮಗಳಿಗೆ ಗೌರವ ನೀಡಿರುವ ವ್ಯಕ್ತಿ. ಇಫ್ತಾರ್ ಕೂಟವು ಸೌಹಾರ್ದ ತತ್ವದ ಭಾಗವಾಗಿತ್ತು. ಇದನ್ನು ರಾಜಕೀಯವನ್ನಾಗಿ ಮಾಡುವ ಪ್ರಯತ್ನ ಖಂಡನೀಯ,” ಎಂದು ಹೇಳಿದ್ದಾರೆ
