ಹೈದರಾಬಾದ್: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಸಿದ ಭಾರೀ ನಾಶವಾಡಿದ ‘ದಿತ್ಯಾ’ ಚಂಡಮಾರುತದ ಅಬ್ಬರಕ್ಕೆ ದಿಕ್ಕು ತಪ್ಪಿದ ಬಾಂಗ್ಲಾದೇಶಿ ಮೀನುಗಾರರ ದೋಣಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಗೆ ಬಂದು ತಲುಪಿದೆ. ಸಮುದ್ರ ಮಧ್ಯೆ ಎಂಜಿನ್ ಕೆಟ್ಟು, ಆಹಾರ-ನೀರಿನ ಕೊರತೆಯಲ್ಲೂ ಸುಮಾರು 20 ದಿನಗಳ ಕಾಲ ಸಾಗರದಲ್ಲಿ ಅಲೆದಾಡಿದ್ದ 13 ಮಂದಿ ಬಾಂಗ್ಲಾ ಮೀನುಗಾರರು ಡಿಸೆಂಬರ್ 1,2025 ರಂದು ಸುರಕ್ಷಿತವಾಗಿ ರಕ್ಷಣೆಯಾಗಿದ್ದಾರೆ.
ಬಾಂಗ್ಲಾದೇಶದ ಖುಲ್ನಾ ವಿಭಾಗದ ಧೋಲಾ ಜಿಲ್ಲೆಯ ಸೊಂಡರ್‌ಬನ್ ಪ್ರದೇಶದ 13 ಮೀನುಗಾರರು ನವೆಂಬರ್ 10ರಂದು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದರು. ಕೇವಲ 7 ದಿನಗಳ ಆಹಾರ ಮತ್ತು ಇಂಧನದೊಂದಿಗೆ ಹೊರಟಿದ್ದ ಅವರ ದೋಣಿ ನವೆಂಬರ್ ಮಧ್ಯದಲ್ಲಿ ದಿತ್ಯಾ ಚಂಡಮಾರುತದ ಬಿರುಗಾಳಿ ಮತ್ತು ಭಾರೀ ಅಲೆಗಳಿಗೆ ಸಿಲುಕಿತು. ದೋಣಿಯ ಎಂಜಿನ್ ಸಂಪೂರ್ಣ ಕೆಟ್ಟು ಹೋಗಿ, ದಿಕ್ಕು ತಪ್ಪಿ ಸಾಗರದಲ್ಲಿ ಅಲೆದಾಡತೊಡಗಿತು. ಗಾಳಿ ಮತ್ತು ಸಮುದ್ರದ ಪ್ರವಾಹದಿಂದ ದೋಣಿ ಭಾರತಕ್ಕೆ ಬಂದಿದೆ.
ಸುಮಾರು 20 ದಿನಗಳ ಕಾಲ ಸಮುದ್ರದಲ್ಲಿ ತೇಲಾಡಿದ್ದ ಈ ಮೀನುಗಾರರು ಕೇವಲ ಬಿಸ್ಕತ್ತ ನೀರು ಮತ್ತು ಮಳೆನೀರನ್ನೇ ಸೇವಿಸಿ ಬದುಕುಳಿದಿದ್ದಾರೆ. ಏಳೇ ದಿನಕ್ಕೆ ಆಹಾರ ಮುಗಿಯಿತು. ನಂತರ ಮಳೆ ಬಂದಾಗ ನೀರು ಕುಡಿದು, ಮೀನುಗಳನ್ನು ಕೈಯಲ್ಲಿ ಹಿಡಿದು ತಿನ್ನುತ್ತಿದ್ದೆವು ಎಂದು ಮೀನುಗಾರರು ಹೇಳಿದ್ದಾರೆ.
ನವೆಂಬರ್ 30ರ ಸಂಜೆ ಶ್ರೀಕಾಕುಳಂ ಜಿಲ್ಲೆಯ ಕಾವಿಟಿ ಕರಾವಳಿಯ ಬಳಿ ಈ ವಿದೇಶಿ ದೋಣಿ ಕಾಣಿಸಿಕೊಂಡಿತು. ಸ್ಥಳೀಯ ಮೀನುಗಾರರು ದೂರದಿಂದಲೇ ಬಾಂಗ್ಲಾ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕೇಳಿ ಸಂದೇಹ ವ್ಯಕ್ತಪಡಿಸಿದರು. ತಕ್ಷಣ ಅವರು ಕಾವಿಟಿ ಮೀನುಗಾರಿಕೆ ಬಂದರಿನ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.
ಕಾವಿಟಿ ಮೆರೈನ್ ಪೊಲೀಸರು ಮತ್ತು ಕೋಸ್ಟಲ್ ಸೆಕ್ಯುರಿಟಿ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ 13 ಮೀನುಗಾರರನ್ನು ಸುರಕ್ಷಿತವಾಗಿ ಕರೆತಂದರು. ಅವರಿಗೆ ಆಹಾರ, ನೀರು, ವೈದ್ಯಕೀಯ ತಪಾಸಣೆ ನೀಡಲಾಯಿತು. ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಆರಂಭಿಕ ತಪಾಸಣೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಯ ಆರೋಪ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನುಗಾರರು ತಪ್ಪಿತಸ್ಥರಲ್ಲ. ಅವರನ್ನು ಮಾನವೀಯತೆಯ ದೃಷ್ಟಿಯಿಂದ ನೋಡಿಕೊಳ್ಳಲಾಗುತ್ತಿದೆ. ಬಾಂಗ್ಲಾದೇಶಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಸ್ವದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸ್ಥಳಿಯ ಅಧಿಕಾರಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಧೋಲಾ ಪೊಲೀಸ್ ಠಾಣೆಯಿಂದಲೂ ಈ 13 ಮಂದಿ ಮೀನುಗಾರರು ನವೆಂಬರ್ 10ರಂದು ಸಮುದ್ರಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅವರ ಕುಟುಂಬಗಳಿಗೆ ಸುರಕ್ಷಿತ ಸಂದೇಶ ತಲುಪಿಸಲಾಗಿದೆ.
