ದೆಹಲಿ ಸ್ಫೋಟ ಪ್ರಕರಣ: ಆರೋಪಿ ಶಾಹಿನಾ ಸಯೀದ್ ರೋಮ್‌ನಲ್ಲಿ 18 ಲಕ್ಷ ನಗದು ಪತ್ತೆ..!

Untitled design 2025 11 29T180101.409

ನವದೆಹಲಿ: ನಗರದ ಕೆಂಪು ಕೋಟೆ (ರೆಡ್ ಫೋರ್ಟ್) ಬಳಿ ನವೆಂಬರ್ 10, 2025 ರಂದು ಸಂಭವಿಸಿದ ಭಯಾನಕ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ದೊಡ್ಡ ಕುರುಹು ಸಿಕ್ಕಿದೆ. ಸ್ಫೋಟದಲ್ಲಿ 13 ಜನರು ಸತ್ತು, ಹಲವರು ಗಾಯಗೊಂಡಿದ್ದರು. ಈಗ ತನಿಖೆಯಲ್ಲಿ ಪ್ರಮುಖ ಆರೋಪಿಯಾಗಿರುವ ಡಾ. ಶಾಹಿನಾ ಸಯೀದ್‌ರ ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ರೂಮ್‌ನಲ್ಲಿ 18 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದ್ದು, ಅದನ್ನ ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಹಣವು ಉಗ್ರ ಕಾರ್ಯಕ್ಷಮತೆಗೆ ಬಳಸಲು ಸಂಗ್ರಹಿಸಲಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ನ. 29, 2025 ರಂದು ಶಾಹಿನಾ ಸಯೀದ್ ನ್ನು ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜೊತೆಗೆ ಇತರ ಆರೋಪಿಗಳಾದ ಡಾ. ಮುಜಮ್ಮಿಲ್ ಶಕೀಲ್ (ಮುಜಮ್ಮಿಲ್ ಗನೈ) ಮತ್ತು ಡಾ. ಅದೀಲ್ ಅಹ್ಮದ್ ರಾಥರ್ ಅವರೂ ಸಹ ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯಾಲಯವು ಈ ಮೂವರನ್ನೂ ಎನ್‌ಐಎ ಕಸ್ಟಡಿಯಲ್ಲಿ ಇರಿಸುವಂತೆ ಆದೇಶ ನೀಡಿದೆ.

ಅಲ್-ಫಲಾಹ್ ವಿಶ್ವವಿದ್ಯಾಲಯದ ರೂಮ್ ನಂಬರ್ 22ರಲ್ಲಿ ತನಿಖೆ ನಡೆಸಿದಾಗ, ಪ್ಲಾಸ್ಟಿಕ್ ಕವರ್‌ನಲ್ಲಿ ಮುಚ್ಚಿಟ್ಟಿದ್ದ 18 ಲಕ್ಷ ರೂಪಾಯಿ ನಗದು ಪತ್ತೆಯಾಯಿತು. ಈ ಹಣವು ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮಹಿಳಾ ವಿಭಾಗ ಜಮಾತ್ ಉಲ್-ಮೊಮಿನಾತ್‌ಗೆ ಸಂಬಂಧಿಸಿದ್ದು, ಭಯೋತ್ಪಾದನಾ ಕಾರ್ಯಗಳಿಗೆ ಬಳಸಲು ಸಂಗ್ರಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಶಾಹಿನಾ ಸಯೀದ್, ಮುಜಮ್ಮಿಲ್ ಶಕೀಲ್ ಮತ್ತು ಅದೀಲ್ ರಾಥರ್ ಸೇರಿದಂತೆ ನಾಲ್ಕು ವೈದ್ಯರು ಈ ಹಣವನ್ನು ಸಂಗ್ರಹಿಸಿ, ಮುಖ್ಯ ಆರೋಪಿ ಡಾ. ಉಮರ್ ನಬಿಗೆ ಹಸ್ತಾಂತರಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಡಾ. ಶಾಹಿನಾ ಸಯೀದ್ (40 ವರ್ಷ) ಎರಡು ವೈವಾಹಿಕ ಜೀವನಗಳ ವಿಫಲತೆಯ ನಂತರ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾಶ್ಮೀರಿ ವೈದ್ಯ ಡಾ. ಮುಜಮ್ಮಿಲ್ ಶಕೀಲ್ ಅವರನ್ನು ಭೇಟಿಯಾಗಿದ್ದಳು . ಇಬ್ಬರ ನಡುವೆ ಪ್ರೀತಿಯ ಬಾಂಧವ್ಯ ಬೆಳೆಯಿತು. ಸೆಪ್ಟೆಂಬರ್ 2023ರಲ್ಲಿ ವಿಶ್ವವಿದ್ಯಾಲಯದ ಬಳಿಯ ಮಸೀದಿಯಲ್ಲಿ ಅವರು ಇಸ್ಲಾಮಿಕ್ ವಿವಾಹ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಕೀಲ್ ಶಾಹಿನಾಗೆ ಉಡುಗೊರೆಯಾಗಿ 6,000 ರೂಪಾಯಿ ನೀಡಿದ್ದರು ಎಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ.

ವಿವಾಹದ ನಂತರ ಇಬ್ಬರು ವಿದ್ಯಾರ್ಥಿ ಗುಂಪುಗಳನ್ನು ಸಂಪರ್ಕಿಸಿ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದರು. ಈ ಸಭೆಗಳಲ್ಲಿ ಜೆಇಎಂನ ಮಹಿಳಾ ವಿಭಾಗ ಜಮಾತ್ ಉಲ್-ಮೊಮಿನಾತ್‌ನ ಸದಸ್ಯರು ಶಾಹಿನಾ ಅವರನ್ನು ಸಂಪರ್ಕಿಸಿದರು. ಶಾಹಿನಾ ತನ್ನ ವೈದ್ಯಕೀಯ ವೃತ್ತಿಯನ್ನು ಆಧಾರವಾಗಿ ಜಮ್ಮು-ಕಾಶ್ಮೀರ, ದೆಹಲಿ-ಎನ್‌ಸಿಆರ್ ಮತ್ತು ಹರಿಯಾಣಕ್ಕೆ ಪ್ರಯಾಣ ಮಾಡುತ್ತಿದ್ದಳು. ಈ ಮೂಲಕ ಹಣ ವರ್ಗಾವಣೆ ಮತ್ತು ಸಂದೇಶಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಳು.

ಪಾಕಿಸ್ತಾನದ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜಮಾತ್ ಉಲ್-ಮೊಮಿನಾತ್‌ನ ಭಾರತೀಯ ಶಾಖೆಯ ಉಸ್ತುವಾರಿಯನ್ನು ಶಾಹಿನಾ ವಹಿಸಿದ್ದಳು ಎಂದು ಎನ್‌ಐಎ ಆರೋಪಿಸಿದೆ. ಈ ದಂಪತಿ ಸ್ಫೋಟಕ ವಸ್ತುಗಳನ್ನು ಸಾಗಿಸಲು ಸಿದ್ಧಪಡಿಸಿದ್ದ 32 ಕಾರುಗಳಲ್ಲಿ ಒಂದು ಖರೀದಿಸಿದ್ದರು. ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಆವರಣದಲ್ಲಿ ನಿಲ್ಲಿಸಲಾಗಿದ್ದ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರು (ನೋಂದಣಿ ಸಂಖ್ಯೆ: HR 87U 9988) ಖರೀದಿಗೆ ಇಬ್ಬರೂ ನಗದು ಹಣ ಪಾವತಿಸಿದ್ದರು. ಈ ಕಾರು ಸ್ಫೋಟಕ ಸಾಗಾಟಕ್ಕೆ ಬಳಸಲು ತಯಾರಾಗಿತ್ತು ಎಂದು ಮೂಲಗಳು ಹೇಳಿವೆ.

ರೆಡ್ ಫೋರ್ಟ್ ಬಳಿ ಸಂಭವಿಸಿದ ಸ್ಫೋಟವು ಐಇಡಿ (ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ರೂಪದಲ್ಲಿತ್ತು. ಮುಖ್ಯ ಆರೋಪಿ ಡಾ. ಉಮರ್ ನಬಿ ಅವರು i20 ಕಾರಿನಲ್ಲಿ ಸ್ಫೋಟಕ ತಂದು ಉಂಟುಮಾಡಿದ್ದರು. ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಆಡಿಟ್ ಮತ್ತು ಶೋ-ಕಾಜ್ ನೋಟಿಸ್ ಜಾರಿಗೊಳಿಸಲಾಗಿದೆ. ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ಶಾಹಿನಾ, ಮುಜಮ್ಮಿಲ್, ಅದೀಲ್ ಮತ್ತು ಇತರರ ವೈದ್ಯಕೀಯ ನೋಂದಣಿ ರದ್ದುಗೊಳಿಸಿದೆ.

Exit mobile version