ನವದೆಹಲಿ: ಕಾಮಿಡಿ ಕಿಂಗ್ ಎಂದೇ ಪ್ರಸಿದ್ಧಿ ಪಡೆದ ನಟ-ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ರೆಸ್ಟೋರೆಂಟ್ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆದಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯಲ್ಲಿ ಪಂಜಾಬ್ ಮೂಲದ ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಗ್ಯಾಂಗ್‌ನ ಪ್ರಮುಖ ಸದಸ್ಯ ಬಂಧು ಮಾನ್ ಸಿಂಗ್ (28) ಅವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕಪಿಲ್ ಶರ್ಮಾ ಅವರು ಈ ವರ್ಷ ಜುಲೈ ತಿಂಗಳಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರೆ ನಗರದಲ್ಲಿ “Kap’s Kitchen & Bar” ಎಂಬ ಭಾರತೀಯ-ಪಂಜಾಬಿ ಶೈಲಿಯ ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ್ದರು. ಬಿರಿಯಾನಿ, ಬಟರ್ ಚಿಕನ್, ಪನ್ನು ಹಾಗೂ ಪಂಜಾಬಿ ಥಾಲಿಗಳಿಗೆ ಹೆಸರಾಗಿದ್ದ ಈ ಕೆಫೆ ತೆರೆದ ಕೇವಲ ಕೆಲವೇ ವಾರಗಳಲ್ಲಿ ಗುಂಡಿನ ದಾಳಿಗೆ ಒಳಗಾಗಿತ್ತು.
ಮೊದಲ ಗುಂಡಿನ ದಾಳಿ ಆಗಸ್ಟ್ 7, 2025ರಂದು ಮಧ್ಯರಾತ್ರಿ ನಡೆಯಿತು. ರೆಸ್ಟೋರೆಂಟ್ ಮುಚ್ಚಿದ ನಂತರ ಮುಖವಾಡ ಧರಿಸಿದ ನಾಲ್ವರು ದುಷ್ಕರ್ಮಿಗಳು ಬಂದು ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾದರು. ಎರಡನೇ ದಾಳಿ ಅಕ್ಟೋಬರ್ 16ರಂದು ನಡೆದಿದ್ದು, ಈ ಬಾರಿ ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ಇದ್ದ ಸಮಯದಲ್ಲಿ ಗುಂಡಿನ ಧಾಳಿ ನಡೆಸಿ ಆತಂಕ ಸೃಷ್ಟಿಸಿದ್ದರು. ಅದರೆ ಅದೃಷ್ಟವಶಾತ್ ಎರಡೂ ಬಾರಿ ಯಾರಿಗೂ ಗಾಯವಾಗಿರಲಿಲ್ಲ, ಆದರೆ ರೆಸ್ಟೋರೆಂಟ್‌ನ ಗಾಜಿನ ಬಾಗಿಲುಗಳು ಮತ್ತು ಹೊರಗಿನ ಗೋಡೆಗಳು ಜಖಂಗೊಂಡಿದ್ದವು.
ಕಪಿಲ್ ಶರ್ಮಾ ಅವರು ಸ್ವತಃ ಈ ಘಟನೆಗಳ ಬಳಿಕ ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP)ಗೆ ದೂರು ನೀಡಿದ್ದರು. ಆದರೆ ಆ ದೂರಿನಲ್ಲಿ ಯಾವುದೇ ಪ್ರಗತಿ ಕಂಡಿಲ್ಲವೆಂದು ಆತಂಕ ವ್ಯಕ್ತಪಡಿಸಿದ್ದರು. ಆ ಬಳಿಕ ಭಾರತದ ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿತ್ತು.
ಈ ದಾಳಿಗಳ ಹಿಂದೆ ಪಂಜಾಬ್‌ನ ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ (Goldy Dhillon) ಗ್ಯಾಂಗ್ ಇದೆ. ಗೋಲ್ಡಿ ಧಿಲ್ಲೋನ್ ಸದ್ಯ ಕೆನಡಾದಲ್ಲೇ ತಲೆಮರೆಸಿಕೊಂಡಿದ್ದು, ಅವನ ಆಪ್ತ ಸಹಚರರಲ್ಲಿ ಒಬ್ಬನಾದ ಬಂಧು ಮಾನ್ ಸಿಂಗ್ ಭಾರತದಲ್ಲಿ ಸಂಚು ರೂಪಿಸಿದ್ದಾನೆ. ದೆಹಲಿ ಪೊಲೀಸರು ನವೆಂಬರ್ 25ರಂದು ಪಶ್ಚಿಮ ದೆಹಲಿಯಲ್ಲಿ ದಾಳಿ ನಡೆಸಿ ಬಂಧು ಮಾನ್ ಸಿಂಗ್‌ನ್ನು ಬಂಧಿಸಿದ್ದಾರೆ. ಅವನಿಂದ ಒಂದು ಪಿಸ್ತೂಲ್ ದಾಳಿಗೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.





