ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ ರಿಯಾಯಿತಿ

Untitled design 2026 06 29T224114.876

ದೆಹಲಿ (ಜೂನ್ 29):  ರಾಜಧಾನಿ ದೆಹಲಿ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ದೆಹಲಿ ಮುಂದಾಗಿದೆ. ವಾಯು ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೊಸ ಎಲೆಕ್ಟ್ರಿಕ್ ವಾಹನ (EV) ನೀತಿಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಹಲವು ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ.

ಹೊಸ ನೀತಿಯ ಪ್ರಕಾರ, ₹30 ಲಕ್ಷದವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಲಾಭವಾಗಲಿದೆ. ಆದರೆ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡನ್ನೂ ಬಳಸುವ ಹೈಬ್ರಿಡ್ ವಾಹನಗಳಿಗೆ ಯಾವುದೇ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ. ಈ ಸೌಲಭ್ಯ ಸಂಪೂರ್ಣವಾಗಿ ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಲಭ್ಯವಾಗಲಿದೆ.

ಇದರ ಜೊತೆಗೆ ದೆಹಲಿ ಸರ್ಕಾರ ಹಂತ ಹಂತವಾಗಿ ಪೆಟ್ರೋಲ್, ಡೀಸೆಲ್‌ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಜನವರಿ 1, 2027ರಿಂದ ದೆಹಲಿಯಲ್ಲಿ ಹೊಸದಾಗಿ ಕೇವಲ ಎಲೆಕ್ಟ್ರಿಕ್ ಆಟೋರಿಕ್ಷಾಗಳ ನೋಂದಣಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಏಪ್ರಿಲ್ 1, 2028ರಿಂದ ಹೊಸ ಪೆಟ್ರೋಲ್ ಹಾಗೂ ಸಿಎನ್‌ಜಿ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಷ್ಟೇ ನೋಂದಣಿ ಅವಕಾಶ ಕಲ್ಪಿಸಲಾಗುವುದು.

ಈ ಹೊಸ ಇವಿ ನೀತಿ ಜುಲೈ 1ರಿಂದ ಜಾರಿಗೆ ಬರಲಿದ್ದು, ಮಾರ್ಚ್ 31, 2030ರವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ದೆಹಲಿ ಸರ್ಕಾರ ಹೊಂದಿದೆ. 

 ಈ ನೀತಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹಂತಹಂತವಾಗಿ ಸಬ್ಸಿಡಿಗಳನ್ನು ಪರಿಚಯಿಸುತ್ತದೆ. ಖರೀದಿದಾರರು ಮೊದಲ ವರ್ಷ ರೂ.30,000, ಎರಡನೇ ವರ್ಷ ರೂ.20,000 ಮತ್ತು ಮೂರನೇ ವರ್ಷ ರೂ.10,000 ಪಡೆಯುತ್ತಾರೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಖರೀದಿದಾರರು ಮೊದಲು 50,000ರೂ, ಎರಡನೇ ಮತ್ತು ಮೂರನೇ ವರ್ಷಗಳಲ್ಲಿ ಕ್ರಮವಾಗಿ 40,000 ಮತ್ತು 30,000 ರೂ.ಗಳ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತಾರೆ. N1 ವರ್ಗದ ಎಲೆಕ್ಟ್ರಿಕ್ ಟ್ರಕ್‌ಗಳ ಖರೀದಿದಾರರು 1 ಲಕ್ಷ ರೂ.ಗಳವರೆಗೆ ಖರೀದಿ ಪ್ರೋತ್ಸಾಹ ಧನ ಪಡೆಯಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು ₹15,000 ಕೋಟಿ ಮೊತ್ತದ ಹೂಡಿಕೆ ಹಾಗೂ ವಿವಿಧ ಪ್ರಯೋಜನಗಳನ್ನು ಸರ್ಕಾರ ನಿರೀಕ್ಷಿಸಿದೆ. ಇದರಲ್ಲಿ ₹7,000 ಕೋಟಿಯನ್ನು ವಾಹನ ಖರೀದಿದಾರರಿಗೆ ಸಬ್ಸಿಡಿಯಾಗಿ ನೀಡಲಾಗುತ್ತದೆ. ಉಳಿದ ₹8,000 ಕೋಟಿಯನ್ನು ರಾಜ್ಯಾದ್ಯಂತ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ.

ಇವಿ ಬಳಕೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೆಹಲಿಯಾದ್ಯಂತ ಸುಮಾರು 32,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸರ್ಕಾರ ಗುರಿ ಹೊಂದಿದೆ. ಈ ಕ್ರಮದಿಂದ ಚಾರ್ಜಿಂಗ್ ಸೌಲಭ್ಯ ಸುಲಭವಾಗಿ ಲಭ್ಯವಾಗಲಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಹೊಸ ಇವಿ ನೀತಿಯ ಮೂಲಕ ದೆಹಲಿ ಸರ್ಕಾರ ವಾಯು ಮಾಲಿನ್ಯ ನಿಯಂತ್ರಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ. 

Exit mobile version