ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲೇ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಸಾವು (16)

ದೆಹಲಿಯಲ್ಲಿ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ಕ್ಲೀನರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್‌ 4ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಕುಟುಂಬದವರೊಂದಿಗೆ ಜಗಳ ಮಾಡಿಕೊಂಡ ಬಳಿಕ ದೆಹಲಿಗೆ ಬಂದಿದ್ದಳು. ದೆಹಲಿಯಲ್ಲಿದ್ದ ತನ್ನ ಸಹೋದರ ಸಂಬಂಧಿಯನ್ನು ಭೇಟಿಯಾಗುವುದು ಆಕೆಯ ಉದ್ದೇಶವಾಗಿತ್ತು. ಆದರೆ ನಗರಕ್ಕೆ ಬಂದ ಬಳಿಕ ದಾರಿ ತಿಳಿಯದೆ ಸಂಕಷ್ಟಕ್ಕೆ ಸಿಲುಕಿದ್ದಳು.

ಬಾಲಕಿ ದೆಹಲಿಯ ಪರಿ ಚೌಕ್‌ ಪ್ರದೇಶದಲ್ಲಿ ಬಸ್‌ನಿಂದ ಇಳಿದಿದ್ದಳು. ಆ ವೇಳೆ ಭಾರಿ ಮಳೆ ಹಾಗೂ ಕತ್ತಲು ಆವರಿಸಿದ್ದರಿಂದ ಮುಂದೇನು ಮಾಡಬೇಕು ಎಂಬುದು ತಿಳಿಯದೆ ಅಲ್ಲೇ ಪರದಾಡುತ್ತಿದ್ದಳು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಸ್ಲೀಪರ್‌ ಬಸ್‌ ಚಾಲಕ ಆಕೆಗೆ ಮನೆಗೆ ತಲುಪಿಸುವುದಾಗಿ ಭರವಸೆ ನೀಡಿದ್ದಾನೆ. ಬಳಿಕ ನೋಯ್ಡಾದ ಸೆಕ್ಟರ್‌ 63ಕ್ಕೆ ಕರೆದೊಯ್ಯುವುದಾಗಿ ಹೇಳಿ ಬಾಲಕಿಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಬಸ್‌ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕ ಮತ್ತು ಕ್ಲೀನರ್‌ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಬಾಲಕಿಯನ್ನು ಕಾಶ್ಮೀರಿ ಗೇಟ್‌ ಪ್ರದೇಶದ ಬಳಿ ಬಸ್‌ನಿಂದ ಕೆಳಗಿಳಿಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಬಾಲಕಿ ತನ್ನ ಕುಟುಂಬಸ್ಥರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಬಸ್‌ ಮತ್ತು ಆರೋಪಿಗಳ ಚಲನವಲನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದ್ದಾರೆ.

ತನಿಖೆಯ ವೇಳೆ ಆರೋಪಿಗಳ ಗುರುತು ಪತ್ತೆಹಚ್ಚಿದ ಪೊಲೀಸರು ಬಸ್‌ ಚಾಲಕ ಕುಲ್ದೀಪ್‌ ಮತ್ತು ಕ್ಲೀನರ್‌ ಸಂದೀಪ್‌ ಅವರನ್ನು ಬಂಧಿಸಿದ್ದಾರೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸಂತ್ರಸ್ತೆಯ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಆಕೆಯ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

 

Exit mobile version