ಭಾರತದಲ್ಲಿ ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಡಕಾಯಿತಿ ವೇಳೆ ಕೊಲೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ, ಅಪಹರಣ, ಸರಕಾರದ ವಿರುದ್ಧ ದಂಗೆ, ಮಾದಕ ವಸ್ತು ಕಳ್ಳಸಾಗಣೆ, ಸೇನೆಯ ವಿರುದ್ಧದ ಅಪರಾಧಗಳಂತಹ ಘೋರ ಕೃತ್ಯಗಳಿಗೆ ಮರಣದಂಡನೆ ವಿಧಿಸಲಾಗುತ್ತದೆ.
ಸಾಂಪ್ರದಾಯಿಕವಾಗಿ ಗಲ್ಲು ಶಿಕ್ಷೆಯ ಮೂಲಕ ಈ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ, ಆದರೆ ಇದು ಕ್ರೂರ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಇದರ ಬದಲಿಗೆ ವಿಷದ ಚುಚ್ಚುಮದ್ದು, ಗುಂಡಿನ ದಾಳಿ, ವಿಷ ಅನಿಲ, ಅಥವಾ ವಿದ್ಯುತ್ ಆಘಾತದಂತಹ ಪರ್ಯಾಯ ವಿಧಾನಗಳನ್ನು ಪರಿಗಣಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಮೂಲಕ ಸಲಹೆ ಸೂಚಿಸಿದೆ.
ಗಲ್ಲು ಶಿಕ್ಷೆಯಲ್ಲಿ, ಅಪರಾಧಿಯನ್ನು ಹಗ್ಗದಿಂದ ನೇತಾಡಿಸಿ ಉಸಿರುಗಟ್ಟಿಸಿ ಕೊಲ್ಲಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ 40 ನಿಮಿಷಗಳವರೆಗೂ ಯಾತನೆ ಅನುಭವಿಸಬೇಕಾಗುತ್ತದೆ, ಏಕೆಂದರೆ ಉಸಿರು ತಕ್ಷಣವೇ ನಿಲ್ಲುವುದಿಲ್ಲ. ಈ ಕಾರಣಕ್ಕೆ, ಗಲ್ಲು ಶಿಕ್ಷೆಯ ವಿಧಾನವನ್ನ ಬದಲಾಯಿಸಬೇಕೆಂಬ ಬೇಡಿಕೆ ಎದ್ದಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ಅರ್ಜಿಯಲ್ಲಿ, ಅಪರಾಧಿಗಳಿಗೆ ಶಿಕ್ಷೆಯ ವಿಧಾನವನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕೆಂದು ಕೋರಲಾಗಿದೆ. ಆದರೆ, ಕೇಂದ್ರ ಸರಕಾರವು ಈ ಬದಲಾವಣೆಗೆ ಸಿದ್ಧವಿಲ್ಲ ಎಂದು ಪ್ರತಿಕ್ರಿಯಿಸಿದೆ, ಇದಕ್ಕೆ ಸುಪ್ರೀಂ ಕೋರ್ಟ್, ಕೇಂದ್ರದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಗಲ್ಲು ಶಿಕ್ಷೆಯ ಪ್ರಕ್ರಿಯೆಯಲ್ಲಿ, ಅಪರಾಧಿಯ ತೂಕಕ್ಕೆ ತಕ್ಕಂತೆ ಹಗ್ಗವನ್ನು ಪರೀಕ್ಷಿಸಲಾಗುತ್ತದೆ. ಮರಳು ತುಂಬಿದ ಚೀಲದ ಮೂಲಕ ತೂಕದ ಪರೀಕ್ಷೆ ನಡೆಸಿ, ಎತ್ತರಕ್ಕೆ ಹೊಂದಿಕೊಂಡಂತೆ ಹಗ್ಗವನ್ನು ಸಿದ್ಧಪಡಿಸಲಾಗುತ್ತದೆ. ಆದರೂ, ಈ ವಿಧಾನವು ಎಲ್ಲರಿಗೂ ಒಂದೇ ರೀತಿಯಾಗಿದ್ದು, ದೇಹದ ಗಾತ್ರದ ವ್ಯತ್ಯಾಸವನ್ನು ಗಣನೆಗೆ ತೆಗೆದುಕೊಳ್ಳದಿರುವುದು ಯಾತನೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ಪರ್ಯಾಯವಾಗಿ, ವಿಷದ ಚುಚ್ಚುಮದ್ದಿನ ವಿಧಾನವು 10-15 ನಿಮಿಷಗಳಲ್ಲಿ ನೋವುರಹಿತವಾಗಿ ಶಿಕ್ಷೆಯನ್ನು ಜಾರಿಗೊಳಿಸುತ್ತದೆ. ಈ ವಿಧಾನದಲ್ಲಿ, ಮೊದಲಿಗೆ ಅರಿವಳಿಕೆ ಔಷಧವನ್ನು ನೀಡಿ ಅಪರಾಧಿಯನ್ನು ನಿದ್ರೆಗೆ ಜಾರಿಸಲಾಗುತ್ತದೆ. ನಂತರ, ಪ್ಯಾಂಕುರೋನಿಯಮ್ ಬ್ರೋಮೈಡ್ ಚುಚ್ಚುಮದ್ದಿನಿಂದ ಸ್ನಾಯುಗಳನ್ನು ಸಡಿಲಗೊಳಿಸಿ, ಪೊಟ್ಯಾಸಿಯಮ್ ಕ್ಲೋರೈಡ್‌ನಿಂದ ಹೃದಯ ಬಡಿತವನ್ನು ನಿಲ್ಲಿಸಲಾಗುತ್ತದೆ.
ಭಾರತದಲ್ಲಿ ಸ್ವಾತಂತ್ರ್ಯದ ನಂತರ, 2023ರ ವರೆಗೆ 561 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದರೆ, ವಿಶ್ವದಾದ್ಯಂತ 95 ದೇಶಗಳು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ, ಮತ್ತು 9 ದೇಶಗಳು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಈ ಶಿಕ್ಷೆಯನ್ನು ತೆಗೆದುಹಾಕಿವೆ. ಭಾರತ ಸೇರಿದಂತೆ 58 ದೇಶಗಳು ಇನ್ನೂ ಗಲ್ಲು ಶಿಕ್ಷೆಯನ್ನು ಮುಂದುವರೆಸಿವೆ. ಕೆಲವು ದೇಶಗಳಾದ ಇರಾನ್, ಸೌದಿ ಅರೇಬಿಯಾದಲ್ಲಿ ತಲೆ ಕತ್ತರಿಸುವಿಕೆ, ಚೀನ, ಅಮೆರಿಕದಲ್ಲಿ ವಿಷದ ಚುಚ್ಚುಮದ್ದು, ಮತ್ತು ಇಂಡೋನೇಷಿಯಾದಂತಹ ದೇಶಗಳಲ್ಲಿ ಕಲ್ಲು ಹೊಡೆಯುವ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ.
