ಮುರಸು ಚಂಡಮಾರುತಕ್ಕೆ ಮೀನುಗಾರರ ದೋಣಿ ಪಲ್ಟಿ; ನಾಲ್ವರು ಸಾ*ವು, ಐವರಿಗಾಗಿ ಶೋಧ!

Untitled design (2)

ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ಬೀಸಿದ ಮುರಸು ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನ ಮೀನುಗಾರರಿದ್ದ ದೋಣಿಯೊಂದು ಆಂಧ್ರಪ್ರದೇಶದ ಕರಾವಳಿಯಲ್ಲಿ ಪಲ್ಟಿಯಾಗಿದೆ. ಈ ದುರಂತದಲ್ಲಿ ನಾಲ್ವರು ಮೀನುಗಾರರು ಮೃತಪಟ್ಟಿದ್ದು, ಉಳಿದ ಐವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಒಟ್ಟು ಒಂಬತ್ತು ಮೀನುಗಾರರು ದೋಣಿಯಲ್ಲಿದ್ದರು. ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳನ್ನು ರಕ್ಷಣಾ ತಂಡಗಳು ಪತ್ತೆಹಚ್ಚಿವೆ. ಈ ಕುರಿತು ಪ್ರಕಾಶಂ ಜಿಲ್ಲಾಧಿಕಾರಿ ಪಿ. ರಾಜಾ ಬಾಬು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿ, ಶವಾಗಾರದಲ್ಲಿ ಇರಿಸಲಾಗಿದೆ.

ಅಕ್ಟೋಬರ್ 29ರಂದು ಮೀನುಗಾರರು ಚೆನ್ನೈನಿಂದ ಸಮುದ್ರಕ್ಕೆ ತೆರಳಿದ್ದರು. ಈ ನಡುವೆ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ದೋಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಲಂಗರು ಹಾಕುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ನಾಲ್ಕು ದೋಣಿಗಳನ್ನು ಆಂಧ್ರಪ್ರದೇಶದ ಕರಾವಳಿಗೆ ಸ್ಥಳಾಂತರಿಸಲಾಗಿತ್ತು. ಮೂರು ದೋಣಿಗಳನ್ನು ರಾಮಯಪಟ್ಟಣಂ ಬಂದರಿನಲ್ಲಿ ಹಾಗೂ ಮತ್ತೊಂದು ದೋಣಿಯನ್ನು ನಿಜಾಂಪಟ್ಟಣಂ ಬಂದರಿನಲ್ಲಿ ನಿಲ್ಲಿಸಲಾಗಿತ್ತು.

ನವೆಂಬರ್ 2ರಂದು ತಮಿಳುನಾಡಿನ ಅಧಿಕಾರಿಗಳು ಎಲ್ಲಾ ಮೀನುಗಾರರು ಮತ್ತು ಅವರ ದೋಣಿಗಳು ಸುರಕ್ಷಿತ ಬಂದರುಗಳಲ್ಲಿರುವುದಾಗಿ ದೃಢಪಡಿಸಿದ್ದರು. ಆದರೆ ನವೆಂಬರ್ 3ರಂದು ನಿಜಾಂಪಟ್ಟಣಂ ಬಂದರಿನಲ್ಲಿ ಲಂಗರು ಹಾಕಿದ್ದ ದೋಣಿಯಲ್ಲಿದ್ದ ಒಂಬತ್ತು ಮೀನುಗಾರರು ರಾಮಯಪಟ್ಟಣಂ ಕಡೆಗೆ ಪ್ರಯಾಣ ಆರಂಭಿಸಿದ್ದರು. ಈ ಪ್ರಯಾಣದ ಬಗ್ಗೆ ಆಂಧ್ರಪ್ರದೇಶ ಅಥವಾ ತಮಿಳುನಾಡಿನ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರಾಮಯಪಟ್ಟಣಂ ಕಡೆಗೆ ತೆರಳುತ್ತಿದ್ದ ವೇಳೆ ದೋಣಿ ತೀವ್ರ ಚಂಡಮಾರುತ ಮತ್ತು ಬಿರುಗಾಳಿಗೆ ಸಿಲುಕಿದೆ. ಪರಿಣಾಮ ಸಮುದ್ರದಲ್ಲಿ ದೋಣಿ ಪಲ್ಟಿಯಾಗಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಅವರಲ್ಲಿ ಮೂವರ ಮೃತದೇಹಗಳು ಕೊತಪಟ್ಟಣಂ ಕರಾವಳಿಯಲ್ಲಿ ಪತ್ತೆಯಾಗಿದ್ದು, ಮತ್ತೊಬ್ಬರ ಮೃತದೇಹವನ್ನು ಶೋಧ ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ನಾಪತ್ತೆಯಾಗಿರುವ ಒಂಬತ್ತು ಮೀನುಗಾರರ ಹೆಸರು ಮತ್ತು ಭಾವಚಿತ್ರಗಳನ್ನು ತಮಿಳುನಾಡು ಸರ್ಕಾರ ಗುರುತಿಸಿ ಅಧಿಕಾರಿಗಳಿಗೆ ನೀಡಿತ್ತು.

ಜಿಲ್ಲಾಧಿಕಾರಿ ಪಿ. ರಾಜಾ ಬಾಬು ಅವರು ತಮಿಳುನಾಡಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ಆಗಮಿಸಲಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ಅವರಿಗೆ ಹಸ್ತಾಂತರಿಸಲಾಗುವುದು. ಪಲ್ಟಿಯಾದ ದೋಣಿಯನ್ನು ಸಮುದ್ರದಿಂದ ದಡಕ್ಕೆ ತರುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಸದ್ಯ ಉಳಿದ ಐವರು ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅವರ ಪತ್ತೆಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

Exit mobile version