ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆ (Children’s Day) ಕೇವಲ ಒಂದು ಆಚರಣೆಯಲ್ಲ, ಇದು ದೇಶದ ಭವಿಷ್ಯವಾಗಿರುವ ಮಕ್ಕಳ ಕಲ್ಯಾಣ, ಶಿಕ್ಷಣದ ಕಡೆ ಗಮನ ಹರಿಸುವ ಒಂದು ಪ್ರಮುಖ ದಿನ. ಈ ದಿನವನ್ನು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಜವಾಹರಲಾಲ್ ಅವರಿಗೆ ಮಕ್ಕಳನ್ನು ಕಂಡರೆ ಅಪಾರ ಪ್ರೀತಿ ಹೀಗಾಗಿ ಅವರ ಜನ್ಮದಿನವನ್ನ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ
ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ: ಮಕ್ಕಳು ಪಡೆಯಬೇಕಾದ ಶಿಕ್ಷಣ, ಆರೋಗ್ಯ, ಸಂರಕ್ಷಣೆ ಮತ್ತು ಸುವಿಧಾನಗಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು. ಪ್ರತಿ ಮಗುವಿಗೆ ಉತ್ತಮ ಶಿಕ್ಷಣದ ಅವಕಾಶ ಒದಗಿಸುವ ಬಗ್ಗೆ ಚರ್ಚೆಗಳನ್ನು ಉತ್ತೇಜಿಸಿ ಶಿಕ್ಷಣದ ಶಿಕ್ಷಣದ ಮಹತ್ವ ತಿಳಿಸುವುದು. ಮಕ್ಕಳ ಸೃಜನಶೀಲತೆ, ಕಲಾತ್ಮಕತೆ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಪ್ರೋತ್ಸಾಹಿಸಿ ಅವರ ಆತ್ಮವಿಶ್ವಾಸವನ್ನು ವರ್ಧಿಸುವುದು. ಮಕ್ಕಳ ಅಭಿಪ್ರಾಯಗಳು ಮತ್ತು ಭಾವನೆಗಳನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ
ಈ ದಿನದಂದು ದೇಶದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ನೃತ್ಯ, ಗೀತೆ, ನಾಟಕ ಮುಂತಾದವುಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ವಿವಿಧ ಸ್ಪರ್ಧೆಗಳು, ಕಲಾ ಮತ್ತು ಕೈಕಸಬು ಪ್ರದರ್ಶನಗಳು ಏರ್ಪಡಿಸಲ್ಪಡುತ್ತವೆ. ಚಾಕಲೇಟ್ಗಳು, ಸಿಹಿತಿಂಡಿಗಳು ಮತ್ತು ಉಡುಗೊರೆಗಳ ವಿತರಣೆಯೊಂದಿಗೆ ಈ ದಿನವು ಮಕ್ಕಳಿಗೆ ಆನಂದ ಮತ್ತು ಉತ್ಸಾಹದ ಸಂದೇಶವನ್ನು ತರುತ್ತದೆ.
ವಿಶ್ವಸಂಸ್ಥೆಯು ನವೆಂಬರ್ 20 ಅನ್ನು ವಿಶ್ವ ಮಕ್ಕಳ ದಿನವಾಗಿ ಆಚರಿಸುತ್ತದೆ. ಈ ದಿನವು 1959 ರಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮತ್ತು 1989 ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಅಂಗೀಕರಿಸಿದ ತಾರೀಕು. ಆದರೆ, ಭಾರತವು ತನ್ನ ಪ್ರಥಮ ಪ್ರಧಾನಿಯ ಪ್ರೀತಿ ಮತ್ತು ಮಕ್ಕಳೊಂದಿಗಿನ ಅವರ ಆತ್ಮೀಯ ಬಂಧನವನ್ನು ಗೌರವಿಸಲು ನವೆಂಬರ್ 14 ಅನ್ನು ಆಯ್ಕೆ ಮಾಡಿಕೊಂಡಿದೆ. ‘ಚಾಚಾ ನೆಹರು’ ಎಂದು ಪ್ರೀತಿಯಿಂದ ಸಂಬೋಧಿಸಲ್ಪಡುವ ಅವರು, ಮಕ್ಕಳ ಬೆಳವಣಿಗೆಯನ್ನು ದೇಶದ ಪ್ರಗತಿಗೆ ಅತ್ಯಗತ್ಯವೆಂದು ಭಾವಿಸಿದ್ದರು.





