ಯುದ್ಧದ ನಡುವೆಯೂ ಗ್ರಾಹಕರಿಗೆ ರಿಲೀಫ್: ಇನ್ಮುಂದೆ ಪ್ರತಿ 15 ದಿನಕ್ಕೊಮ್ಮೆ ತೈಲ ಬೆಲೆ ಚೆಕ್ಕಿಂಗ್

Untitled design (7)

ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕ ಇಂಧನ ಮಾರುಕಟ್ಟೆಯನ್ನು ಆವರಿಸಿದೆ. ಕಚ್ಚಾ ತೈಲ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಗನಕ್ಕೇರುತ್ತಿದ್ದರೂ, ಭಾರತದ ಸಾಮಾನ್ಯ ಗ್ರಾಹಕರ ಮೇಲೆ ಅದರ ಹೊರೆ ಬೀಳದಂತೆ ಕೇಂದ್ರ ಸರ್ಕಾರ ಶನಿವಾರ (ಮಾರ್ಚ್ 27) ಐತಿಹಾಸಿಕ ಕ್ರಮವೊಂದನ್ನು ಪ್ರಕಟಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ ತಲಾ 10 ರೂಪಾಯಿಯಂತೆ ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಇರಾನ್ ಮೇಲೆ ನಡೆದ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ ಬ್ಯಾರೆಲ್‌ಗೆ ಕೇವಲ 68 ಡಾಲರ್ ಇದ್ದ ಕಚ್ಚಾ ತೈಲ ದರ, ಮಾರ್ಚ್ 7ರ ವೇಳೆಗೆ 100 ಡಾಲರ್ ಗಡಿ ದಾಟಿ, ಪ್ರಸ್ತುತ 110 ಡಾಲರ್ ತಲುಪಿದೆ. ಈ ಹಠಾತ್ ಏರಿಕೆಯು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆಯನ್ನು ನೂರರ ಗಡಿ ದಾಟಿಸುವ ಆತಂಕ ಮೂಡಿಸಿತ್ತು.

ಸರ್ಕಾರದ ಮಾಸ್ಟರ್ ಪ್ಲಾನ್

ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ (CBIC) ಅಧ್ಯಕ್ಷ ವಿವೇಕ್ ಚತುರ್ವೇದಿ ಈ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಇನ್ನು ಮುಂದೆ ಪ್ರತಿ 15 ದಿನಕ್ಕೊಮ್ಮೆ ತೈಲ ದರಗಳನ್ನು ಮತ್ತು ಸುಂಕದ ಪ್ರಮಾಣವನ್ನು ಪುನರ್ ಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದಾಗ ಅದರ ಲಾಭವನ್ನು ತಕ್ಷಣವೇ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ.

ಈ ಸುಂಕ ಕಡಿತದ ಉದ್ದೇಶ ಚಿಲ್ಲರೆ ಮಾರಾಟ ಬೆಲೆಯನ್ನು ಇಳಿಸುವುದಕ್ಕಿಂತ ಹೆಚ್ಚಾಗಿ, ಬೆಲೆ ಏರಿಕೆಯಾಗದಂತೆ ತಡೆಯುವುದಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (OMCs) ಅನುಭವಿಸುತ್ತಿರುವ ನಷ್ಟವನ್ನು ಈ ಸುಂಕ ಕಡಿತದ ಮೂಲಕ ಸರ್ಕಾರವೇ ಭರಿಸಲಿದೆ. ಪ್ರಸ್ತುತ ಈ ಬದಲಾವಣೆಯ ನಂತರ:

ಆತಂಕ ಬೇಡ ಎಂದ ಕೇಂದ್ರ

2022ರ ಏಪ್ರಿಲ್‌ನಿಂದ ಭಾರತದಲ್ಲಿ ತೈಲ ಬೆಲೆಗಳನ್ನು ಸ್ಥಿರವಾಗಿಡಲಾಗಿದೆ. ಯುದ್ಧದ ಒತ್ತಡವನ್ನು ಸರ್ಕಾರವೇ ಭರಿಸುತ್ತಿದೆ ಹೊರತು ಜನರ ಮೇಲಲ್ಲ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಲ್ಲುವ ಅವಶ್ಯಕತೆಯಿಲ್ಲ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಭಾರತವು ರಷ್ಯಾ ಸೇರಿದಂತೆ ಇತರ ಮೂಲಗಳಿಂದ ತೈಲ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ದೇಶದಲ್ಲಿ ತೈಲ ಕೊರತೆಯಾಗುವುದಿಲ್ಲ ಎಂಬ ಭರವಸೆ ನೀಡಿದೆ.

Exit mobile version