ನವದೆಹಲಿ, ಸೆಪ್ಟೆಂಬರ್ 12: ಭಾರತದ ಆತಿಥ್ಯದಲ್ಲಿ ದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದ್ದು, ಜಾಗತಿಕ ರಾಜಕೀಯ, ಆರ್ಥಿಕತೆ, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಇಂಧನ ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯ ಕೇಂದ್ರವಾಗಿವೆ. ಶೃಂಗಸಭೆಯಲ್ಲಿ ಭಾಗವಹಿಸಿರುವ ಜಾಗತಿಕ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. ಈ ನಡುವೆ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಬಹುನಿರೀಕ್ಷಿತ ದ್ವಿಪಕ್ಷೀಯ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ.
ಕ್ಸಿ ಜಿನ್‌ಪಿಂಗ್ ಸುಮಾರು ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ್ದು, ಉಭಯ ನಾಯಕರ ಮಾತುಕತೆ ಮಹತ್ವ ಪಡೆದುಕೊಂಡಿದೆ. ಭಾರತ-ಚೀನಾ ಸಂಬಂಧದಲ್ಲಿ ಗಡಿ ವಿಚಾರ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಗಡಿ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ. ಇದರ ಜೊತೆಗೆ ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ವೀಸಾ ಸೇವೆಗಳ ಬಗ್ಗೆಯೂ ಮಾತುಕತೆ ನಡೆಯಲಿದೆ.
ಮಿಲಿಟರಿ ಹಾಗೂ ರಾಜತಾಂತ್ರಿಕ ಸಂವಾದವನ್ನು ಮತ್ತಷ್ಟು ಬಲಪಡಿಸುವುದು, ಎರಡೂ ದೇಶಗಳ ನಡುವಿನ ವ್ಯಾಪಾರ ಅಸಮತೋಲನ ಕಡಿಮೆ ಮಾಡುವುದು ಮತ್ತು ಭಾರತೀಯ ಕಂಪನಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರವೇಶ ಕಲ್ಪಿಸುವ ವಿಚಾರಗಳೂ ಪ್ರಮುಖವಾಗಿವೆ. ಚೀನಾಕ್ಕೆ ಭಾರತದ ರಫ್ತು ಹೆಚ್ಚಿಸುವುದು, ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನ ಪೂರೈಕೆಯನ್ನು ಸುಗಮಗೊಳಿಸುವುದು ಮತ್ತು ಚೀನಾದ ಹೂಡಿಕೆಗೆ ವಿಶ್ವಾಸಾರ್ಹ ನಿಯಮಗಳನ್ನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಬ್ರಿಕ್ಸ್ ಸಭೆಗೂ ಮುನ್ನ ಚೀನಾದ ಮಹತ್ವದ ಘೋಷಣೆ
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ಮುನ್ನ ಚೀನಾ ಮಹತ್ವದ ನಿರ್ಧಾರವೊಂದನ್ನು ಘೋಷಿಸಿದೆ. ಸುಮಾರು ಆರು ವರ್ಷಗಳ ಬಳಿಕ ಭಾರತಕ್ಕೆ ವಿಮಾನ ಸೇವೆ ಪುನರಾರಂಭಿಸುವುದಾಗಿ ತಿಳಿಸಿದೆ. ಚೀನಾ ಸದರ್ನ್ ಏರ್‌ಲೈನ್ಸ್ ಮೂಲಕ ಗುವಾಂಗ್ಝೌ-ನವದೆಹಲಿ ವಿಮಾನ ಸೇವೆ ಮತ್ತೆ ಆರಂಭವಾಗಲಿದೆ. ಉಭಯ ದೇಶಗಳ ನಡುವಿನ ಸಂಪರ್ಕ ಮತ್ತು ಜನರ ಓಡಾಟದ ದೃಷ್ಟಿಯಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ.
ಹಲವು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ
ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿರುವ ಹಲವು ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ಸರಣಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಸೇರಿದಂತೆ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಭಾರತ್ ಮಂಟಪದಲ್ಲಿ ‘ಸಮಗ್ರ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯನ್ನು ಬಲಪಡಿಸುವುದು’ ಎಂಬ ವಿಷಯದ ಕುರಿತು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರ ಕ್ಲೋಸ್‌ಡ್-ಡೋರ್ ಸಭೆಯೂ ನಡೆಯಿತು. ಬಳಿಕ ನಾಯಕರು ಭಾರತ ಆಯೋಜಿಸಿರುವ ‘ಇಂಡಿಯಾ ಇನೋವೇಟ್ಸ್’ ಪ್ರದರ್ಶನಕ್ಕೆ ಭೇಟಿ ನೀಡಿದರು. ನಂತರ ಅಧಿಕೃತ ಗ್ರೂಪ್ ಫೋಟೋ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲೂ ನಾಯಕರು ಭಾಗವಹಿಸಿದರು.
