ಭಾರತದ ಮೊದಲ ಬುಲೆಟ್ ರೈಲು: 2027ರ ಮೇ-ಜೂನ್‌ನಲ್ಲಿ ಟ್ರಯಲ್ ರನ್!

Untitled design (42)

ವಡೋದರಾ ಸೆ.8: ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆ ಇದೀಗ ಮಹತ್ವದ ಹಂತ ತಲುಪಿದೆ. ದೇಶದ ಮೊದಲ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಸಂಚಾರವನ್ನು 2027ರ ಮೇ ಅಥವಾ ಜೂನ್‌ನಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನ ನಿರ್ಮಾಣ ಕಾರ್ಯಗಳು ವೇಗವಾಗಿ ಸಾಗುತ್ತಿವೆ. ಕಾರಿಡಾರ್‌ನ ಕಾಮಗಾರಿ ಪೂರ್ಣಗೊಂಡಿರುವ ಭಾಗದಲ್ಲಿ ಮೊದಲ ಹಂತದ ಪ್ರಾಯೋಗಿಕ ಸಂಚಾರ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬುಲೆಟ್ ರೈಲಿನ ಮೊದಲ ಬಾಡಿ ಫ್ರೇಮ್ ಸಿದ್ಧಗೊಂಡಿದ್ದು, ಇದೀಗ ಅದರ ರಚನಾತ್ಮಕ ಸಾಮರ್ಥ್ಯವನ್ನು ಪರಿಶೀಲಿಸುವ ಪರೀಕ್ಷೆಗೆ ಕಳುಹಿಸಲಾಗಿದೆ. ಕೋಚ್‌ಗಳ ಬಲ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ಹಂತವಾಗಿದೆ ಎಂದು ಸಚಿವರು ಹೇಳಿದ್ದಾರೆ.

2027ರ ಮೇ ಅಥವಾ ಜೂನ್ ವೇಳೆಗೆ ಬುಲೆಟ್ ರೈಲು ಹಳಿಗಳ ಮೇಲೆ ಪ್ರಾಯೋಗಿಕ ಸಂಚಾರ ನಡೆಸಲಿದೆ. ಪರೀಕ್ಷಾ ಸಂಚಾರ ಸುಮಾರು 2ರಿಂದ 4 ತಿಂಗಳು ನಡೆಯಲಿದ್ದು, ಅಗತ್ಯ ಸುರಕ್ಷತಾ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸೇವೆ ಆರಂಭಿಸುವ ನಿರೀಕ್ಷೆಯಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.

ಮುಂಬೈನಿಂದ ಅಹಮದಾಬಾದ್‌ಗೆ ಕೇವಲ 90 ನಿಮಿಷ

ಬುಲೆಟ್ ರೈಲು ಸೇವೆ ಆರಂಭವಾದ ಬಳಿಕ ಮುಂಬೈ–ಅಹಮದಾಬಾದ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಅಹಮದಾಬಾದ್‌ನಿಂದ ಮುಂಬೈಗೆ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ತಲುಪುವ ನಿರೀಕ್ಷೆಯಿದೆ.

ಈ ಯೋಜನೆಯು ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶದಲ್ಲೇ ಹೈಸ್ಪೀಡ್ ರೈಲು ನಿರ್ಮಾಣ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.

ಇದೇ ವೇಳೆ ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನ ಕಾಮಗಾರಿಯೂ ವೇಗ ಪಡೆದುಕೊಂಡಿದೆ. ಸೂರತ್–ವಾಪಿ ವಿಭಾಗದ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸೂರತ್–ಬಿಲಿಮೋರಾ ವಿಭಾಗವನ್ನು ಮುಂದಿನ ವರ್ಷ ಮೊದಲ ಕಾರ್ಯಾಚರಣಾ ವಿಭಾಗವಾಗಿ ಆರಂಭಿಸುವ ಉದ್ದೇಶವಿದೆ.

ಒಟ್ಟು 508 ಕಿ.ಮೀ. ಉದ್ದದ ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್–ದಿಯು ಪ್ರದೇಶಗಳ ಮೂಲಕ ಹಾದುಹೋಗಲಿದೆ.

ಕಾರಿಡಾರ್‌ನಲ್ಲಿ ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರ, ಆನಂದ, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.

ಜಪಾನ್‌ನ ತಂತ್ರಜ್ಞಾನ ಮತ್ತು ಸಹಕಾರದೊಂದಿಗೆ ರೂಪುಗೊಳ್ಳುತ್ತಿರುವ ಈ ಯೋಜನೆ, ಭಾರತದ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುವ ನಿರೀಕ್ಷೆ ಮೂಡಿಸಿದೆ.

Exit mobile version