ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ: ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ

Web Photo Editor (24)

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ನೀಡಿರುವ ಕಾಣಿಕೆ ಹಣ ಹಾಗೂ ಆಭರಣಗಳ ಎಣಿಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಮತ್ತು ಕಳ್ಳತನ ನಡೆದಿರುವ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡವು (ಎಸ್ಐಟಿ) ತನ್ನ ಪ್ರಾಥಮಿಕ ವರದಿಯನ್ನು ಇಂದು (ಜೂನ್ 22) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಿದೆ.

ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿದ್ದ ಸುಮಾರು 40 ಸಿಬ್ಬಂದಿಯನ್ನು ತಕ್ಷಣದಿಂದಲೇ ವಜಾಗೊಳಿಸಲಾಗಿದೆ. ಬ್ಯಾಂಕ್ ಟ್ರಸ್ಟ್ ಈಗಾಗಲೇ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ನಗದು ಮತ್ತು ಆಭರಣಗಳ ಎಣಿಕೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಜಾರಿಗೊಳಿಸಲಾಗಿದೆ.

ಆರು ದಿನಗಳ ತೀವ್ರ ತನಿಖೆ
ಮೂವರು ಸದಸ್ಯರ ಎಸ್ಐಟಿ ತಂಡವು ಆರು ದಿನಗಳ ಕಾಲ ಅಯೋಧ್ಯೆಯಲ್ಲೇ ಬೀಡುಬಿಟ್ಟು ತೀವ್ರ ತನಿಖೆ ನಡೆಸಿದೆ. ಈ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ವಿಧಾನಗಳು ಮತ್ತು ಆಭರಣಗಳ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.

ದೇವಸ್ಥಾನದ ಟ್ರಸ್ಟ್ ನ  ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಮುಗಿಯುವವರೆಗೆ ವಿಚಾರಣೆಗೆ ಒಳಗಾದ ಯಾರೂ ಕೂಡ ಅಯೋಧ್ಯೆ ನಗರವನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ಎಸ್ಐಟಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪ್ರಮುಖ ಆಪ್ತನ ಮೇಲೆ ಕೇಂದ್ರೀಕೃತ ತನಿಖೆ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಹಚರ ಎನ್ನಲಾದ ರಾಮಶಂಕರ್ ಯಾದವ್ ಅವರನ್ನು ಎಸ್ಐಟಿ ಪದೇ ಪದೇ ವಿಚಾರಣೆ ನಡೆಸಿ‌ದ್ದು, ಅವರ ಆಪ್ತರು, ಸಂಬಂಧಿಕರು ಮತ್ತು ಆಸ್ತಿಪಾಸ್ತಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

ಕೇವಲ ಕಾಣಿಕೆಗಷ್ಟೇ ಸೀಮಿತವಲ್ಲದ ತನಿಖೆ
ಈ ತನಿಖೆಯು ಕೇವಲ ಕಾಣಿಕೆ ಹಣದ ದುರುಪಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಟ್ರಸ್ಟ್ ವಿವಿಧ ಹಂತಗಳಲ್ಲಿ ಮಾಡಿದ ಖರೀದಿಗಳು, ದೇವಸ್ಥಾನದ ನಿರ್ಮಾಣ ಸಾಮಗ್ರಿಗಳ ಖರೀದಿ ವ್ಯವಹಾರಗಳ ಮೇಲೂ ತನಿಖೆ ವ್ಯಾಪಿಸಿದೆ.

ಯಾವಾಗ ಶುರುವಾಯಿತು ವಂಚನೆ?
ಈ ವಂಚನೆಯು ಪ್ರಯಾಗ್ರಾಜ್ನ ‘ಮಹಾಕುಂಭ ಮೇಳ’ದ ಸಮಯದಲ್ಲಿ (2025ರ ಆರಂಭ) ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಎರಡು ತಿಂಗಳ ಅವಧಿಯಲ್ಲಿ ಪ್ರತಿದಿನ ಸುಮಾರು 10 ಲಕ್ಷ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದರು. ಭಕ್ತರ ದಟ್ಟಣೆ ಎಷ್ಟಿತ್ತೆಂದರೆ, ದೇವಸ್ಥಾನದ ದೇಣಿಗೆ ಪೆಟ್ಟಿಗೆಗಳು ಕೇವಲ ಎರಡು ಗಂಟೆಗಳಲ್ಲೇ ನೋಟುಗಳಿಂದ ತುಂಬಿ ಹೋಗುತ್ತಿದ್ದವು. ಈ ದಟ್ಟಣೆಯ ಲಾಭವನ್ನು ಅಕ್ರಮಿಗಳು ಪಡೆದುಕೊಂಡು ದೊಡ್ಡ ಮೊತ್ತದ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ವರದಿ ಸಲ್ಲಿಕೆಯಾದ ನಂತರ ತಪ್ಪು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುವ ನಿರೀಕ್ಷೆಯಿದೆ. ಈ ಪ್ರಕರಣ ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿದ್ದು, ಅಯೋಧ್ಯೆಯ ಪವಿತ್ರ ಸ್ಥಳದಲ್ಲಿ ನಡೆದಿರುವ ಈ ಆರ್ಥಿಕ ಅವ್ಯವಹಾರದ ಅಂತಿಮ ತನಿಖಾ ವರದಿಗಾಗಿ ಎಲ್ಲರೂ ಕಾತುರರಾಗಿದ್ದಾರೆ.

Exit mobile version