ಆಂಧ್ರದ ಅತ್ತೆ ಮನೆಯಲ್ಲಿ ಅಳಿಯನಿಗೆ ರಾಜಾತಿಥ್ಯ: ಬರೋಬ್ಬರಿ 290 ಖಾದ್ಯಗಳ ಭರ್ಜರಿ ಔತಣ

Untitled design 2026 01 17T110054.774

ಹೊಸದಾಗಿ ಮದುವೆಯಾದ ಅಳಿಯ ಮೊದಲ ಬಾರಿಗೆ ಅತ್ತೆ ಮನೆಗೆ ಹಬ್ಬಕ್ಕೆ ಬಂದರೆ ಅಲ್ಲಿನ ಸಂಭ್ರಮವೇ ಬೇರೆ. ಅದರಲ್ಲೂ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಗಳ ಭಾಗದಲ್ಲಿ ಅಳಿಯನಿಗೆ ನೀಡುವ ಸತ್ಕಾರ ಇಡೀ ದೇಶದಲ್ಲೇ ಹೆಸರುವಾಸಿ. ಈ ಬಾರಿ ಸಂಕ್ರಾಂತಿ ಹಬ್ಬದಂದು ಆಂಧ್ರದ ನರ್ಸಿಪಟ್ಟಂನಲ್ಲಿ ಅತ್ತೆ-ಮಾವ ತಮ್ಮ ಹೊಸ ಅಳಿಯನಿಗಾಗಿ ಬರೋಬ್ಬರಿ 290 ಬಗೆಯ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಉಣಬಡಿಸಿದ್ದಾರೆ.

ನರ್ಸಿಪಟ್ಟಂನ ಶಾಂತಿನಗರ ನಿವಾಸಿಗಳಾದ ರಮೇಶ್ ಕುಮಾರ್ ಮತ್ತು ಕಲಾವತಿ ದಂಪತಿಗಳು, ತಮ್ಮ ಮಗಳು ಮತ್ತು ಅಳಿಯ ಶ್ರೀಹರ್ಷ (29) ಅವರ ಮೊದಲ ಸಂಕ್ರಾಂತಿ ಆಚರಣೆಯನ್ನು ಸ್ಮರಣೀಯವಾಗಿಸಲು ಅತೀ ವಿಜೃಂಭಣೆಯಿಂದ ಉಪಹಾರ ತಯಾರಿಸಿ ಅಳಿಯನಿಗೆ ಬಡಿಸಿದ್ದಾರೆ. ಸಾಂಪ್ರದಾಯಿಕ ಗೋದಾವರಿ ಶೈಲಿಯಲ್ಲಿ ತಯಾರಾದ ಈ ಔತಣದಲ್ಲಿ ಸಿಹಿ ತಿಂಡಿಗಳು, ಖಾರ, ವಿವಿಧ ಬಗೆಯ ಅನ್ನ, ಸಾರು, ಪಲ್ಯಗಳು ಹಾಗೂ ತಂಪು ಪಾನೀಯಗಳು ಸೇರಿದ್ದವು. ಊಟದ ಮೇಜಿನ ಮೇಲೆ ಸಾಲು ಸಾಲಾಗಿ ಜೋಡಿಸಿಟ್ಟಿದ್ದ ಪಾತ್ರೆಗಳನ್ನು ಕಂಡ ಅಳಿಯ ಶ್ರೀಹರ್ಷ ಒಂದು ಕ್ಷಣ ದಂಗಾಗಿದ್ದಾರೆ.

ಏನೇನಿತ್ತು ಈ 290 ಖಾದ್ಯಗಳ ಪಟ್ಟಿಯಲ್ಲಿ ?

ಈ ಬೃಹತ್ ಔತಣದಲ್ಲಿ ಆಂಧ್ರದ ಪ್ರಸಿದ್ಧ ಪೂತರೆಕುಲು, ಬೊಬ್ಬಟ್ಟುಗಳು, ಹತ್ತಾರು ಬಗೆಯ ಉಪ್ಪಿನಕಾಯಿಗಳು, ವಿವಿಧ ಶೈಲಿಯ ಬಿರಿಯಾನಿ ಮತ್ತು ಪುಲಾವ್, ಸಾಂಪ್ರದಾಯಿಕ ಆಂಧ್ರದ ಪಪ್ಪು (ಬೇಳೆ), ಆವಕಾಯ ಹಾಗೂ ರುಚಿಕರವಾದ ದಕ್ಷಿಣ ಭಾರತದ ಖಾದ್ಯಗಳಿದ್ದವು. ಪ್ರತಿಯೊಂದು ಪದಾರ್ಥವನ್ನೂ ಅತ್ಯಂತ ಪ್ರೀತಿಯಿಂದ ಮನೆಯಲ್ಲೇ ಸಿದ್ಧಪಡಿಸಲಾಗಿತ್ತು. ಮಗಳ ಮೇಲಿನ ಪ್ರೀತಿ ಮತ್ತು ಅಳಿಯನ ಮೇಲಿನ ಗೌರವವನ್ನು ಈ ರೀತಿಯಾಗಿ ತೋರಿಸಿದ್ದಾರೆ.

ಕೇವಲ ನರ್ಸಿಪಟ್ಟಂ ಮಾತ್ರವಲ್ಲದೆ, ಗುಂಟೂರಿನ ತೆನಾಲಿಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಅಲ್ಲಿನ ಅತ್ತೆ ಮನೆಯವರು ತಮ್ಮ ಅಳಿಯ ಶ್ರೀದತ್ತ ಅವರಿಗಾಗಿ 158 ವಿವಿಧ ರೀತಿಯ ಖಾದ್ಯಗಳ ಭೋಜನ ಬಡಿಸಿದ್ದರು. ಆಂಧ್ರದ ಸಂಸ್ಕೃತಿಯಲ್ಲಿ ಅಳಿಯನನ್ನು ಸಾಕ್ಷಾತ್ ವಿಷ್ಣು ಸ್ವರೂಪಿ ಎಂದು ಭಾವಿಸಲಾಗುತ್ತದೆ. ವಿಶೇಷವಾಗಿ ಸಂಕ್ರಾಂತಿ ಅಥವಾ ಪೆದ್ದ ಪಂಡುಗ ಸಮಯದಲ್ಲಿ ಅಳಿಯನಿಗೆ ಈ ರೀತಿ ಸತ್ಕಾರ ಮಾಡುವುದು ಅಲ್ಲಿನ ಒಂದು ಸಂಪ್ರದಾಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಊಟದ ಫೋಟೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಇಂತಹ ಅತ್ತೆ ಮನೆ ಸಿಗಲು ಪುಣ್ಯ ಮಾಡಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಸಂಕ್ರಾಂತಿ ಅಳಿಯಂದಿರ ಪಾಲಿಗೆ ನಿಜಕ್ಕೂ ರುಚಿಕರವಾಗಿತ್ತು.

Exit mobile version