ಮಲಗಿದ್ದ ಪೋಷಕರ ಮಧ್ಯೆ ಸಿಲುಕಿ 26 ದಿನದ ನವಜಾತ ಶಿಶು ದಾರುಣ ಸಾ*ವು

Untitled design 2025 12 12T140710.351

ಅಂಬೋಹಾ: ಮಲಗಿದ್ದ ಪೋಷಕರ ಮಧ್ಯೆ ಆಕಸ್ಮಿಕವಾಗಿ ಸಿಲುಕಿದ ಕಾರಣ, 26 ದಿನದ ನವಜಾತ ಶಿಶುವೊಂದು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಂಬೋಹಾ ಜಿಲ್ಲೆಯ ಗಜೆಲಾ ಪ್ರದೇಶದಲ್ಲಿ ನಡೆದಿದೆ.

ಮೃತಪಟ್ಟ ಪುಟ್ಟ ಶಿಶುವನ್ನು ಸೂಪಿಯಾನ್ ಎಂದು ಗುರುತಿಸಲಾಗಿದೆ. ಈ ಮಗು ನವೆಂಬರ್ 10 ರಂದು ಜನಿಸಿತ್ತು ಮತ್ತು ಪೋಷಕರಾದ ಸದ್ಧಾಂ ಅಬ್ಬಾಸಿ (25) ಮತ್ತು ಅವರ ಪತ್ನಿ ಅಸ್ಮಾ ಅವರಿಗೆ ಮೊದಲ ಮಗುವಾಗಿತ್ತು. ಮಗು ಹುಟ್ಟಿ ಕೇವಲ 26 ದಿನಗಳಾಗಿದ್ದವು.

ಶನಿವಾರ ರಾತ್ರಿ, ದಂಪತಿಗಳು ಮಲಗಲು ಹೋಗುವ ಮೊದಲು ಮುದ್ದು ಮಗುವಾದ ಸೂಪಿಯಾನ್ ಅನ್ನು ತಮ್ಮ ಹಾಸಿಗೆಯ ಮಧ್ಯದಲ್ಲಿ ಸುರಕ್ಷಿತವಾಗಿ ಮಲಗಿಸಿದ್ದರು. ಮಗುವನ್ನು ಸಾಮಾನ್ಯವಾಗಿ ಹಾಸಿಗೆಯ ಮಧ್ಯದಲ್ಲಿ ಮಲಗಿಸುವುದು ಕೆಲವು ಕುಟುಂಬಗಳಲ್ಲಿ ಸಾಮಾನ್ಯ ಪದ್ಧತಿಯಾಗಿದೆ. ಮಗು ಜೊತೆ ನಾವು ಮಲಗಿದ್ದರೆ ಅದು ಸುರಕ್ಷಿತವಾಗಿರುತ್ತದೆ ಎಂದು ಮಗುವನ್ನ ಮಧ್ಯದಲ್ಲಿ ಮಲಗಿಸಿ ತಾವು ಪಕ್ಕದಲ್ಲಿ ಮಲಗಿದ್ದರು.

ಕುಟುಂಬ ಸದಸ್ಯರ ಹೇಳಿಕೆಯ ಪ್ರಕಾರ, ಮಲಗಿದ್ದ ಪೋಷಕರಿಬ್ಬರೂ ಮಗುವಿನ ಅರಿವಿಲ್ಲದೆ ತಮ್ಮ ಬದಿಯನ್ನು ಬದಲಾಯಿಸಿದ್ದಾರೆ. ಬಳಿಕ ಸೂಪಿಯಾನ್ ಇಬ್ಬರ ನಡುವೆ ಸಿಕ್ಕಿಹಾಕಿಕೊಂಡಿದೆ. ಇದರಿಂದ ಕೇವಲ 26 ದಿನದ ಈ ಹಸುಗೂಸು ಉಸಿರಾಡಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

ಭಾನುವಾರ ಬೆಳಿಗ್ಗೆ ಪೋಷಕರು ಎಚ್ಚರಗೊಂಡಾಗ, ಮಗು ಯಾವುದೇ ರೀತಿ ಸ್ಪಂದಿಸದಿದ್ದನ್ನ ಕಂಡು, ಪೋಷಕರು ತಕ್ಷಣ ಮಗುವನ್ನು ಎತ್ತಿಕೊಂಡು ಹತ್ತಿರದ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ವೈದ್ಯರು ಮಗು ಅದಾಗಲೇ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವು ಆಕಸ್ಮಿಕ ದುರಂತದಿಂದ ಸಾವನ್ನಪ್ಪಿದೆ ಎಂಬುದನ್ನು ಪೊಲೀಸರು ಮತ್ತು ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ. ಈ ಘಟನೆಯು ಸಂಪೂರ್ಣವಾಗಿ ಆಕಸ್ಮಿಕವಾಗಿದ್ದು, ಪೋಷಕರ ನಿರ್ಲಕ್ಷ್ಯದ ಬದಲು, ಆಳವಾದ ನಿದ್ರೆಯಲ್ಲಿ ನಡೆದ ದುರಾದೃಷ್ಟಕರ ಘಟನೆಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ಭೇಟಿ ನೀಡಿದರು. ಮಗುವಿನ ದೇಹವನ್ನು ಪರಿಶೀಲಿಸಿದಾಗ, ಯಾವುದೇ ಬಾಹ್ಯ ಗಾಯಗಳಿಲ್ಲದಿರುವುದು ಮತ್ತು ಉಸಿರುಗಟ್ಟಿದ ಕಾರಣದಿಂದ ಸಾವಾಗಿದೆ ಎಂಬ ಅಂಶಗಳು ದೃಢಪಟ್ಟಿವೆ. ಈ ಘಟನೆಯಲ್ಲಿ ಯಾವುದೇ ದುರುದ್ದೇಶ ಕಂಡುಬರದ ಕಾರಣ, ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.

Exit mobile version