ಫುಕೆಟ್-ದೆಹಲಿ ವಿಮಾನದ ಪೈಲಟ್ ಡ್ರಗ್ಸ್ ಸೇವಿಸಿದ್ದು ದೃಢ: ಏರ್ ಇಂಡಿಯಾ ಸಿಇಒಗೆ ಸರ್ಕಾರದ ಸಮನ್ಸ್

ಕೈಗೊಳ್ಳಲಿರುವ 2026 08 11T224602.094

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಹಾರಾಟದ ಮಧ್ಯೆ ದಿಢೀರನೆ ಸುಮಾರು 300 ಅಡಿ ಕೆಳಗೆ ಕುಸಿದು ಆತಂಕ ಸೃಷ್ಟಿಸಿದ ಘಟನೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ವಿಮಾನದ ಮುಖ್ಯ ಪೈಲಟ್ ನಡೆಸಿದ ಎರಡನೇ ಡೋಪ್ ಪರೀಕ್ಷೆಯಲ್ಲೂ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಘಟನೆಯ ಬಳಿಕ ನಿಯಮಾವಳಿಗಳಂತೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಮಾದಕ ದ್ರವ್ಯ ಸೇವನೆ ಪತ್ತೆಹಚ್ಚುವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಹ-ಪೈಲಟ್‌ನ ಪರೀಕ್ಷಾ ವರದಿಯಲ್ಲಿ ಯಾವುದೇ ಅಸಹಜತೆ ಕಂಡುಬಂದಿರಲಿಲ್ಲ. ಆದರೆ ಮುಖ್ಯ ಪೈಲಟ್‌ನ ಮೊದಲ ಡ್ರಗ್ಸ್ ಪರೀಕ್ಷೆಯಲ್ಲಿ ಅನುಮಾನಾಸ್ಪದ ಫಲಿತಾಂಶ ಬಂದಿತ್ತು. ಹೀಗಾಗಿ ಅವರ ಮಾದರಿಯನ್ನು ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಿ ಖಚಿತಪಡಿಸಿಕೊಳ್ಳಲಾಗಿತ್ತು. ಇದೀಗ ಹೊರಬಂದಿರುವ ಅಂತಿಮ ವರದಿಯಲ್ಲಿ ಡ್ರಗ್ಸ್ ಸೇವನೆ ದೃಢಪಟ್ಟಿದೆ ಎನ್ನಲಾಗಿದೆ.

ಈ ಬೆಳವಣಿಗೆಯ ಕುರಿತು ಸೋಮವಾರ ಪ್ರತಿಕ್ರಿಯಿಸಿದ್ದ ಏರ್ ಇಂಡಿಯಾ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಾರ್ಗಸೂಚಿಗಳ ಅನ್ವಯ ವಿಮಾನ ಸಿಬ್ಬಂದಿಯನ್ನು ನಿಯಮಿತವಾಗಿ ಮಾದಕ ದ್ರವ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಆ ಸಂದರ್ಭದಲ್ಲಿ ಪರೀಕ್ಷೆಯ ಅಧಿಕೃತ ಅಂತಿಮ ವರದಿ ಇನ್ನೂ ತಮ್ಮ ಕೈಸೇರಿಲ್ಲ ಎಂದು ಸಂಸ್ಥೆ ಹೇಳಿಕೊಂಡಿತ್ತು.

ಏರ್ ಇಂಡಿಯಾ ಸಿಇಒಗೆ ಸಮನ್ಸ್

ವಿಮಾನ ಸುರಕ್ಷತೆಗೆ ಸಂಬಂಧಿಸಿದ ಈ ಗಂಭೀರ ಘಟನೆಯನ್ನು ಕೇಂದ್ರ ಸರ್ಕಾರವೂ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ DGCA, ಏರ್ ಇಂಡಿಯಾದ ನಿರ್ಗಮಿತ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರಿಗೆ ಸಮನ್ಸ್ ನೀಡಿದ್ದವು. ವಿಲ್ಸನ್ ಸೇರಿದಂತೆ ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಘಟನೆಯ ಕುರಿತು ವಿವರಣೆ ನೀಡಿದ್ದಾರೆ.

ಈ ಉನ್ನತ ಮಟ್ಟದ ಸಭೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷರ ಮುಖ್ಯ ಸಲಹೆಗಾರ ಪ್ರದೀಪ್ ಸಿಂಗ್ ಖರೋಲಾ, DGCA ಡೈರೆಕ್ಟರ್ ಜನರಲ್ ವೀರ್ ವಿಕ್ರಮ್ ಯಾದವ್ ಹಾಗೂ AAIB ಡೈರೆಕ್ಟರ್ ಜನರಲ್ ಜಿ.ವಿ.ಜಿ. ಯುಗಂಧರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಾಗಿತ್ತು ಆಗಸ್ಟ್ 4ರಂದು?

ಏರ್‌ಬಸ್ A320 ಮಾದರಿಯ AI2379 ವಿಮಾನವು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಹಾರಾಟದ ಮಧ್ಯದಲ್ಲೇ ಸುಮಾರು 300 ಅಡಿ ಕೆಳಗೆ ಕುಸಿದಿತ್ತು. ವಿಮಾನದಲ್ಲಿ ತೀವ್ರ ಅಸ್ಥಿರತೆ ಉಂಟಾಗಿದ್ದು, ಪೈಲಟ್‌ಗಳು ನಿಯಂತ್ರಣವನ್ನು ಮರಳಿ ಪಡೆದು ವಿಮಾನವನ್ನು ಸುರಕ್ಷಿತವಾಗಿ ದೆಹಲಿಯಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಘಟನೆಯಲ್ಲಿ ನಾಲ್ವರು ವಿಮಾನ ಸಿಬ್ಬಂದಿ ಹಾಗೂ 17 ಪ್ರಯಾಣಿಕರು ಗಾಯಗೊಂಡಿದ್ದರು.

ತನಿಖಾ ಮೂಲಗಳ ಪ್ರಕಾರ, ಹಾರಾಟದ ವೇಳೆ ಆಟೋ-ಪೈಲಟ್ ವ್ಯವಸ್ಥೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಬಳಿಕ ಸಹ-ಪೈಲಟ್ ವಿಮಾನವನ್ನು ಮ್ಯಾನುವಲ್ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ‘ಸ್ಟಾಲ್ ವಾರ್ನಿಂಗ್’ ಅಲಾರಾಂ ಮೊಳಗಿತ್ತು. ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ದೋಷ, ತಾಂತ್ರಿಕ ವೈಫಲ್ಯಗಳು ಹಾಗೂ ವಾಯುಮಾರ್ಗದಲ್ಲಿನ ಅಸ್ಥಿರತೆ ಸೇರಿದಂತೆ ಹಲವು ಅಂಶಗಳು ಒಂದೇ ಸಮಯದಲ್ಲಿ ಸಂಭವಿಸಿರುವ ಸಾಧ್ಯತೆಯಿದೆ ಎಂದು ತನಿಖೆ ನಡೆಯುತ್ತಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಘಟನೆಯ ಕುರಿತು ಸಮಗ್ರ ತನಿಖೆ ನಡೆಸುತ್ತಿದೆ. ಮತ್ತೊಂದೆಡೆ, ವಿಮಾನಯಾನ ಸುರಕ್ಷತೆಯಲ್ಲಿ ಯಾವುದೇ ರೀತಿಯ ರಾಜಿಗೆ ಅವಕಾಶವಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಸ್ಪಷ್ಟಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಘಟನೆಯ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಲಾಗುತ್ತಿದೆ.

Exit mobile version