ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಬಹುಮತದ ಕಸರತ್ತು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಎಐಎಡಿಎಂಕೆ (AIADMK) ಪಕ್ಷ ಮತ್ತೆ ಸಕ್ರಿಯವಾಗಿದೆ. ಪಳನಿಸ್ವಾಮಿ ನಿವಾಸಕ್ಕೆ 40ಕ್ಕೂ ಹೆಚ್ಚು ಎಐಎಡಿಎಂಕೆ ಶಾಸಕರು ಆಗಮಿಸಿದ್ದಾರೆ.
ಪಾಂಡಿಚೆರಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಈಗ ಚೆನ್ನೈನ ಪಳನಿಸ್ವಾಮಿ ನಿವಾಸದತ್ತ ದಂಡು ಕಟ್ಟಿ ಬಂದಿರುವುದು ರಾಜಕೀಯ ವಲಯದಲ್ಲಿ ಬೃಹತ್ ಚರ್ಚೆಗೆ ಕಾರಣವಾಗಿದೆ.ಇಪಿಎಸ್ ಸಾರಥ್ಯದಲ್ಲಿ ಎಐಎಡಿಎಂಕೆ ಮತ್ತೆ ಆಕ್ಟೀವ್ ಆಗಿರುವುದು ಸ್ಪಷ್ಟವಾಗಿವೆ.
ಪಳನಿಸ್ವಾಮಿ ನಿವಾಸದಲ್ಲಿ ಶಾಸಕರೊಂದಿಗೆ ಮಹತ್ವದ ರಾಜಕೀಯ ಮಾತುಕತೆ ನಡೆಯುತ್ತಿದೆ. ಟಿವಿಕೆ ಸರ್ಕಾರ ರಚಿಸುವಲ್ಲಿ ವಿಫಲವಾದಲ್ಲಿ ಏನು ಮುಂದೆ? ಎಂಬ ಪ್ರಶ್ನೆ ಈಗ ಎಲ್ಲರ ಮುಂದಿದೆ. ಈ ನಡುವೆ ಎಐಎಡಿಎಂಕೆ ಡಿಎಂಕೆ ಜೊತೆ ಕೈ ಜೋಡಿಸುವ ಸಾಧ್ಯತೆಯ ಬಗ್ಗೆ ತೀವ್ರ ಊಹಾಪೋಹಗಳು ಹರಿದಾಡುತ್ತಿವೆ.
ಇಪಿಎಸ್ ಅವರು ಶಾಸಕರೊಂದಿಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿಗಳು ಹೆಚ್ಚಾಗಿವೆ. ಟಿವಿಕೆಗೆ ಬೆಂಬಲ ನೀಡುವುದೇ, ಡಿಎಂಕೆಯೊಂದಿಗೆ ಮೈತ್ರಿ ಹೆಣೆಸುವುದೇ ಅಥವಾ ಸ್ವತಂತ್ರವಾಗಿ ತನ್ನದೇ ಆದ ತಂತ್ರ ರೂಪಿಸುವುದೇ ಎಂಬ ವಿಚಾರಗಳು ಚರ್ಚೆಯ ಮುಖ್ಯ ಅಂಶಗಳಾಗಿವೆ.
ಪಾಂಡಿಚೆರಿ ರೆಸಾರ್ಟ್‌ನಿಂದ ಚೆನ್ನೈಗೆ ಶಾಸಕರ ಆಗಮನವು ಎಐಎಡಿಎಂಕೆಯಲ್ಲಿ ಒಗ್ಗಟ್ಟು ಮತ್ತು ಚುನಾವಣೆಯ ನಂತರದ ತಂತ್ರಗಳನ್ನು ಬಲಪಡಿಸುವ ಪ್ರಯತ್ನವಾಗಿದೆ.ತಮಿಳುನಾಡು ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಪರಿಸ್ಥಿತಿಯಲ್ಲಿ ಎಐಎಡಿಎಂಕೆಯ ನಿರ್ಧಾರವು ನಿರ್ಣಾಯಕವಾಗುವ ಸಾಧ್ಯತೆ ಹೆಚ್ಚಿದೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಹಿಂದಿನ ವೈರತ್ವ ಇದ್ದರೂ, ಪ್ರಸ್ತುತ ರಾಜಕೀಯ ಅನಿವಾರ್ಯತೆಗಳು ಹೊಸ ಸಮೀಕರಣಗಳಿಗೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ವಿಜಯ್ ಅವರ ಟಿವಿಕೆ ಪಕ್ಷವು ಬಹುಮತ ಸಾಬೀತುಪಡಿಸಲು ಕಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಈ ಚಲನೆಯು ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳಲ್ಲಿ ಎಐಎಡಿಎಂಕೆಯ ಅಧಿಕೃತ ನಿಲುವು ಸ್ಪಷ್ಟವಾಗುವ ನಿರೀಕ್ಷೆಯಿದೆ. ಇದು ತಮಿಳುನಾಡಿನಲ್ಲಿ ಯಾವ ಸರ್ಕಾರ ರಚನೆಯಾಗುತ್ತದೆ ಎಂಬುದನ್ನು ನಿರ್ಧರಿಸುವ ಕೀಲಿಕೈಯಾಗಿದೆ.ರಾಜ್ಯದ ಜನರು ಈ ರೆಸಾರ್ಟ್ ರಾಜಕಾರಣ ಮತ್ತು ತೆರೆಮರೆ ಚರ್ಚೆಗಳಿಗೆ ಆಯಾಸಗೊಂಡಿದ್ದು, ಸ್ಥಿರ ಸರ್ಕಾರ ಬೇಕು ಎಂಬುದು ಅವರ ಆಶಯವಾಗಿದೆ.
